Friday, January 9, 2026

ಪ್ಲಾಸ್ಟಿಕ್ ತ್ಯಾಜ್ಯಕ್ಕೆ ‘ಅವ್ರೊ’ ಕಾಯಕಲ್ಪ: ಪರಿಸರ ಸ್ನೇಹಿ ಪೀಠೋಪಕರಣ ಕ್ರಾಂತಿಗೆ ಮುನ್ನುಡಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ಲಾಸ್ಟಿಕ್ ಪೀಠೋಪಕರಣಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಅವ್ರೊ ಇಂಡಿಯಾ ಲಿಮಿಟೆಡ್, ಪ್ಲಾಸ್ಟಿಕ್ ಮಾಲಿನ್ಯದ ಸಮಸ್ಯೆಯನ್ನು ಆರ್ಥಿಕ ಅವಕಾಶವಾಗಿ ಪರಿವರ್ತಿಸುವ ಮಹತ್ವಾಕಾಂಕ್ಷೆಯೊಂದಿಗೆ ಮರುಬಳಕೆ ಕ್ಷೇತ್ರಕ್ಕೆ ಲಗ್ಗೆ ಇಟ್ಟಿದೆ. ತನ್ನ ಅಂಗಸಂಸ್ಥೆಯಾದ ಅವ್ರೊ ರಿಸೈಕ್ಲಿಂಗ್ ಲಿಮಿಟೆಡ್ ಮೂಲಕ ಗಾಜಿಯಾಬಾದ್‌ನಲ್ಲಿ ಅತ್ಯಾಧುನಿಕ ‘ಗ್ರೀನ್‌ಫೀಲ್ಡ್’ ಮರುಬಳಕೆ ಘಟಕವನ್ನು ಕಂಪನಿ ಸ್ಥಾಪಿಸಿದೆ.

ಪ್ರಸ್ತುತ ಈ ಘಟಕವು ಪ್ರತಿ ತಿಂಗಳು 500 ಮೆಟ್ರಿಕ್ ಟನ್ ಪ್ಲಾಸ್ಟಿಕ್ ಸಂಸ್ಕರಿಸುವ ಸಾಮರ್ಥ್ಯ ಹೊಂದಿದ್ದು, 2026ರ ವೇಳೆಗೆ ಇದನ್ನು 1,000 ಮೆಟ್ರಿಕ್ ಟನ್‌ಗೆ ಹೆಚ್ಚಿಸುವ ಗುರಿ ಹೊಂದಿದೆ.

ಈ ಯೋಜನೆಗಾಗಿ ಈಗಾಗಲೇ 25 ಕೋಟಿ ಹೂಡಿಕೆ ಮಾಡಲಾಗಿದ್ದು, ಮುಂದಿನ ಎರಡು ವರ್ಷಗಳಲ್ಲಿ ಹೆಚ್ಚುವರಿ 30 ಕೋಟಿ ಹೂಡಿಕೆ ಮಾಡಲು ಕಂಪನಿ ನಿರ್ಧರಿಸಿದೆ.

ಈವರೆಗೆ ಮರುಬಳಕೆ ಅಸಾಧ್ಯವೆಂದು ಭಾವಿಸಲಾಗಿದ್ದ ಸಿಮೆಂಟ್ ಚೀಲ, ಉಪ್ಪು-ಸಕ್ಕರೆ ಚೀಲ ಹಾಗೂ ಪಟ್ಟಿ ಬ್ಯಾಗ್‌ಗಳನ್ನು ಸಂಸ್ಕರಿಸಲು ಅವ್ರೊ ಕಂಪನಿ ಪೇಟೆಂಟ್ ಪಡೆದ ವಿಶೇಷ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ.

ಮಾರುಕಟ್ಟೆಯಲ್ಲಿ ಹೊಸ ಸಂಚಲನ:

ಈ ಘಟಕದಲ್ಲಿ ಉತ್ಪಾದನೆಯಾಗುವ ಮರುಬಳಕೆಯ ಪ್ಲಾಸ್ಟಿಕ್ ಹರಳುಗಳು ಹೊಸ ಪ್ಲಾಸ್ಟಿಕ್‌ಗಿಂತ ಶೇ. 40 ರಷ್ಟು ಕಡಿಮೆ ಬೆಲೆಗೆ ಲಭ್ಯವಾಗಲಿವೆ. ಇದು ಏರ್ ಕೂಲರ್, ವಾಷಿಂಗ್ ಮೆಷಿನ್ ಮತ್ತು ಆಟೋಮೊಬೈಲ್ ಬಿಡಿಭಾಗಗಳ ತಯಾರಿಕೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಿದೆ. ಸರ್ಕಾರದ ‘ವಿಸ್ತರಿತ ತಯಾರಕರ ಜವಾಬ್ದಾರಿ’ ನಿಯಮದಂತೆ, ಉತ್ಪನ್ನಗಳಲ್ಲಿ ಶೇ. 30 ರಷ್ಟು ಮರುಬಳಕೆಯ ಪ್ಲಾಸ್ಟಿಕ್ ಬಳಸುವುದು ಕಡ್ಡಾಯವಾಗಿದ್ದು, ಅವ್ರೊ ಇಂಡಿಯಾದ ಈ ಹೆಜ್ಜೆ ಉದ್ಯಮ ವಲಯಕ್ಕೆ ದೊಡ್ಡ ವರದಾನವಾಗಲಿದೆ.

“ಪ್ಲಾಸ್ಟಿಕ್ ಸಮಸ್ಯೆಯನ್ನು ಕೇವಲ ಸಣ್ಣ ಪ್ರಯತ್ನಗಳಿಂದ ಸುಧಾರಿಸಲು ಸಾಧ್ಯವಿಲ್ಲ. ದೊಡ್ಡ ಮಟ್ಟದ ತಂತ್ರಜ್ಞಾನ ಮತ್ತು ದೃಢ ಸಂಕಲ್ಪದ ಅಗತ್ಯವಿದೆ. ನಾವು ತ್ಯಾಜ್ಯವನ್ನು ಅವಕಾಶವಾಗಿ ಪರಿವರ್ತಿಸುವ ರಾಷ್ಟ್ರವ್ಯಾಪಿ ಪರಿಸರ ವ್ಯವಸ್ಥೆಯನ್ನು ನಿರ್ಮಿಸುತ್ತಿದ್ದೇವೆ,” ಎಂದು ಅವ್ರೊ ಇಂಡಿಯಾ ಲಿಮಿಟೆಡ್‌ನ ಅಧ್ಯಕ್ಷರಾದ ಶ್ರೀ ಸುಶೀಲ್ ಕುಮಾರ್ ಅಗರ್ವಾಲ್ ತಿಳಿಸಿದ್ದಾರೆ.

2002 ರಲ್ಲಿ ಆರಂಭವಾಗಿ ಇಂದು 24 ರಾಜ್ಯಗಳಲ್ಲಿ 30,000 ಕ್ಕೂ ಹೆಚ್ಚು ಚಿಲ್ಲರೆ ವ್ಯಾಪಾರಿಗಳ ಬಲ ಹೊಂದಿರುವ ಅವ್ರೊ ಇಂಡಿಯಾ, ಭವಿಷ್ಯದಲ್ಲಿ ‘ಮದರ್ ಅಂಡ್ ಬೇಬಿ’ ಮಾದರಿಯ ಮರುಬಳಕೆ ಘಟಕಗಳ ಜಾಲವನ್ನು ದೇಶಾದ್ಯಂತ ವಿಸ್ತರಿಸಲು ಯೋಜಿಸಿದೆ. ಈ ಮೂಲಕ ಭಾರತವನ್ನು ಸುಸ್ಥಿರ ಪ್ಲಾಸ್ಟಿಕ್ ನಿರ್ವಹಣೆಯಲ್ಲಿ ಜಾಗತಿಕ ನಾಯಕನನ್ನಾಗಿ ಮಾಡುವ ಗುರಿಯನ್ನು ಕಂಪನಿ ಹೊಂದಿದೆ.

error: Content is protected !!