Wednesday, October 22, 2025

ನಟ ದರ್ಶನ್‌ ಮನವಿ ಹಿನ್ನೆಲೆ: ಸೆಲ್‌ ಪರಿಶೀಲನೆ ನಡೆಸಿದ ಕಾನೂನು ಪ್ರಾಧಿಕಾರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟ ದರ್ಶನ್ ಅವರ ಮನವಿ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಾಧೀಶ ಬಿ. ವರದರಾಜು ಅವರು ಮಂಗಳವಾರ ಮಧ್ಯಾಹ್ನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನದಲ್ಲಿರುವ ನಟ ದರ್ಶನ್ ಅವರನ್ನು ಭೇಟಿ ಮಾಡಿದ ಅವರು, ಕಾರಾಗೃಹ ನಿಯಮಾವಳಿ ಪ್ರಕಾರ ನೀಡಲಾದ ಸೌಲಭ್ಯಗಳ ಕುರಿತು ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ದರ್ಶನ್ ಅವರ ಸೆಲ್‌ಗೆ ಭೇಟಿ ನೀಡಿದ ವರದರಾಜು ಅವರು ನೇರವಾಗಿ ನಟರಿಂದ ವಿಚಾರಣೆ ನಡೆಸಿ ಅವರ ಹೇಳಿಕೆ ದಾಖಲಿಸಿಕೊಂಡಿರುವ ಮಾಹಿತಿ ಲಭ್ಯವಾಗಿದೆ. ಈ ಪರಿಶೀಲನೆ ವರದಿಯನ್ನು ಬುಧವಾರ ಎಸಿಎಂಎಂ ನ್ಯಾಯಾಲಯಕ್ಕೆ ಸಲ್ಲಿಸುವ ಸಾಧ್ಯತೆಗಳಿದ್ದು, ನ್ಯಾಯಾಲಯವು ವರದಿ ಪರಿಶೀಲನೆ ಬಳಿಕ ದರ್ಶನ್ ಅವರಿಗೆ ಸೌಲಭ್ಯ ನೀಡುವ ವಿಷಯದಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವ ನಿರೀಕ್ಷೆಯಿದೆ.

ದರ್ಶನ್ ಅವರು ತಮ್ಮ ಮನವಿಯಲ್ಲಿ, ನ್ಯಾಯಾಲಯದ ಆದೇಶ ಹೊರತಾಗಿಯೂ ಜೈಲಿನಲ್ಲಿ ಕನಿಷ್ಠ ಸೌಲಭ್ಯ ನೀಡದಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಸ್ಥಳ ಪರಿಶೀಲನೆ ನಡೆಸುವಂತೆ ಸೂಚನೆ ನೀಡಿತ್ತು.

ಇದೇ ವೇಳೆ, ಪರಪ್ಪನ ಅಗ್ರಹಾರ ಜೈಲಿನ ಸೌಲಭ್ಯಗಳ ಕುರಿತ ವಿವಾದವೂ ಗಂಭೀರವಾಗಿದೆ. ಪಾಕಿಸ್ತಾನದ ಉಗ್ರರಿಗೆ ಕೇರಂ ಬೋರ್ಡ್ ಮತ್ತು ಟಿವಿ ಸೌಲಭ್ಯ ನೀಡಲಾಗುತ್ತಿದ್ದರೆ, ನಟ ದರ್ಶನ್ ಅವರಿಗೆ ಹಾಸಿಗೆ ಹಾಗೂ ದಿಂಬು ನೀಡದಿರುವ ಬಗ್ಗೆ ದರ್ಶನ್ ಪರ ವಕೀಲ ಎಸ್. ಸುನೀಲ್ ಕುಮಾರ್ ನ್ಯಾಯಾಲಯದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು.

error: Content is protected !!