ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಕರ್ನಾಟಕದ ಶಕ್ತಿ ದೇವತೆ, ಭಕ್ತರ ಆರಾಧ್ಯ ದೈವ ಬಾದಾಮಿ ತಾಲೂಕಿನ ಬನಶಂಕರಿ ದೇವಿಯ ಜಾತ್ರಾ ಮಹೋತ್ಸವಕ್ಕೆ ಇಂದು ಅದ್ಧೂರಿ ಚಾಲನೆ ಸಿಕ್ಕಿದೆ. ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಜೈಕಾರಗಳ ನಡುವೆ ದೇವಿಯ ರಥೋತ್ಸವ ಅತ್ಯಂತ ವೈಭವದಿಂದ ಜರುಗಿತು.
ಬನಶಂಕರಿ ಜಾತ್ರೆಯ ವಿಶೇಷವೆಂದರೆ ರಥ ಎಳೆಯುವ ಹಗ್ಗ. ಪ್ರತಿ ವರ್ಷದಂತೆ ಈ ಬಾರಿಯೂ ಗದಗ ಜಿಲ್ಲೆಯ ಮಾಡಲಗೇರಿಯಿಂದ ದೇವಿಯ ತೇರು ಎಳೆಯುವ ಬೃಹತ್ ಹಗ್ಗವನ್ನು ನದಿಯಲ್ಲೇ ಎತ್ತಿನ ಬಂಡಿಯ ಮೂಲಕ ತರಲಾಯಿತು. ಸಂಜೆ 5 ಗಂಟೆಗೆ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಹಗ್ಗ ಕಟ್ಟಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ಭಕ್ತರು ನಿಂಬೆಹಣ್ಣು ಹಾಗೂ ನಾಣ್ಯಗಳನ್ನು ಎಸೆದು ತಮ್ಮ ಹರಕೆ ತೀರಿಸಿದರು. “ಬನಶಂಕರಿ ತಾಯಿ ನಮ್ಮೆಲ್ಲರ ಬೇಡಿಕೆ ಈಡೇರಿಸುವ ಶಕ್ತಿ ದೇವತೆ” ಎಂಬ ಗಾಢ ನಂಬಿಕೆ ಇಲ್ಲಿನ ಭಕ್ತರದ್ದು.
ಬನಶಂಕರಿ ಜಾತ್ರೆ ಕೇವಲ ಒಂದು ದಿನಕ್ಕೆ ಸೀಮಿತವಲ್ಲ. ಬರೊಬ್ಬರಿ ಒಂದು ತಿಂಗಳ ಕಾಲ ಇಲ್ಲಿ ಸಡಗರ ಮುಂದುವರಿಯಲಿದೆ.


