February 16, 2026
Monday, February 16, 2026
spot_img

ಬಾಗೇಪಲ್ಲಿ ಕಾಂಗ್ರೆಸ್ ಶಾಸಕ ಸುಬ್ಬಾರೆಡ್ಡಿ ಸದಸ್ಯತ್ವ ರದ್ದು: ಹೈಕೋರ್ಟ್‌ನಿಂದ ‘ಬಿಗ್ ಶಾಕ್’!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ರಾಜಕೀಯ ಚಿತ್ರಣ ಕ್ಷಣಾರ್ಧದಲ್ಲಿ ಬದಲಾಗಿದೆ. ಚುನಾವಣಾ ಅಫಿಡವಿಟ್‌ನಲ್ಲಿ ಮಾಹಿತಿ ಮರೆಮಾಚಿದ ಆರೋಪದ ಮೇಲೆ ಕಾಂಗ್ರೆಸ್ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರ ಶಾಸಕ ಸ್ಥಾನವನ್ನು ಅಸಿಂಧುಗೊಳಿಸಿ ಕರ್ನಾಟಕ ಹೈಕೋರ್ಟ್ ಸೋಮವಾರ ಮಹತ್ವದ ತೀರ್ಪು ಪ್ರಕಟಿಸಿದೆ.

2023ರ ವಿಧಾನಸಭಾ ಚುನಾವಣೆ ವೇಳೆ ಸುಬ್ಬಾರೆಡ್ಡಿ ಅವರು ತಮ್ಮ ನಾಮಪತ್ರದಲ್ಲಿ ಸಂಪೂರ್ಣ ಆಸ್ತಿ ವಿವರಗಳನ್ನು ಘೋಷಿಸಿರಲಿಲ್ಲ ಹಾಗೂ ತಮ್ಮ ಮೇಲಿರುವ ಕ್ರಿಮಿನಲ್ ಪ್ರಕರಣಗಳ ಮಾಹಿತಿಯನ್ನು ಮರೆಮಾಚಿದ್ದರು ಎಂದು ಆರೋಪಿಸಿ ಬಿಜೆಪಿಯ ಪರಾಜಿತ ಅಭ್ಯರ್ಥಿ ಸಿ. ಮುನಿರಾಜು ಅವರು ಜೂನ್ 24, 2023 ರಂದು ನ್ಯಾಯಾಲಯದ ಮೆಟ್ಟಿಲೇರಿದ್ದರು.

ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಪೀಠವು, ಅಫಿಡವಿಟ್‌ನಲ್ಲಿ ನಿಯಮಗಳ ಉಲ್ಲಂಘನೆಯಾಗಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಈ ಕಠಿಣ ಕ್ರಮ ಕೈಗೊಂಡಿದೆ. ಸುಬ್ಬಾರೆಡ್ಡಿ ಪರ ವಕೀಲರು ಆದೇಶಕ್ಕೆ ಒಂದು ತಿಂಗಳ ತಡೆಯಾಜ್ಞೆ ನೀಡುವಂತೆ ಮಾಡಿದ ಮನವಿಯನ್ನು ಕೋರ್ಟ್ ಕಡಾಖಂಡಿತವಾಗಿ ತಿರಸ್ಕರಿಸಿದೆ.

ತಮ್ಮನ್ನು ವಿಜಯಿ ಅಭ್ಯರ್ಥಿ ಎಂದು ಘೋಷಿಸಬೇಕೆಂಬ ಮುನಿರಾಜು ಅವರ ಕೋರಿಕೆಯನ್ನು ನ್ಯಾಯಾಲಯ ಪುರಸ್ಕರಿಸಿಲ್ಲ. ಈ ಆದೇಶದಿಂದಾಗಿ ಬಾಗೇಪಲ್ಲಿ ಕ್ಷೇತ್ರ ಈಗ ಶಾಸಕರಿಲ್ಲದೆ ಖಾಲಿಯಾದಂತಾಗಿದೆ. ಈ ಕ್ಷೇತ್ರದಲ್ಲಿ ಮರುಚುನಾವಣೆ ನಡೆಸುವ ಸಂಪೂರ್ಣ ಅಧಿಕಾರ ಚುನಾವಣಾ ಆಯೋಗಕ್ಕಿದೆ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.

ಈ ತೀರ್ಪು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದು, ಜನಪ್ರತಿನಿಧಿಗಳು ಚುನಾವಣಾ ಅಫಿಡವಿಟ್ ಸಲ್ಲಿಸುವಾಗ ಪಾರದರ್ಶಕತೆ ಕಾಪಾಡಿಕೊಳ್ಳಬೇಕು ಎಂಬ ಎಚ್ಚರಿಕೆಯ ಸಂದೇಶ ರವಾನಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !