Saturday, December 20, 2025

6 ಹುಲಿಗಳ ಸರಣಿ ಸಾವಿನ ಪ್ರಕರಣದ ಆರೋಪಿಗಳಿಗೆ ಜಾಮೀನು ಮಂಜೂರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಲೆ ಮಹದೇಶ್ವರಬೆಟ್ಟ ವನ್ಯಧಾಮದ ಪಚ್ಚೆದೊಡ್ಡಿ ಅರಣ್ಯ ಪ್ರದೇಶದಲ್ಲಿ ನಡೆದಿದ್ದ ದೈತ್ಯ ಹುಲಿಯ ಭೀಕರ ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳಿಗೆ ಕೊಳ್ಳೇಗಾಲದ ಜೆಎಂಎಫ್‌ಸಿ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.

ಜಾಮೀನು ಪಡೆದ ಆರೋಪಿಗಳನ್ನು ಹಸುವಿನ ಮಾಲೀಕ ಚಂದು, ಸಿದ್ದರಾಜು, ಸಂಪು ಹಾಗೂ ಗಣೇಶ ಎಂದು ಗುರುತಿಸಲಾಗಿದೆ. ಈ ನಾಲ್ವರ ಮೇಲೆ ಹುಲಿಯನ್ನು ಕ್ರೂರವಾಗಿ ಕೊಂದ ಆರೋಪ ಹೊರಿಸಲಾಗಿತ್ತು.

ಕಳೆದ ಅಕ್ಟೋಬರ್ 2 ರಂದು, ಅಂದರೆ ದೇಶಾದ್ಯಂತ ‘ವನ್ಯಜೀವಿ ಸಪ್ತಾಹ’ ಆಚರಿಸಲಾಗುತ್ತಿದ್ದ ಸಂದರ್ಭದಲ್ಲೇ ಈ ಘೋರ ಕೃತ್ಯ ನಡೆದಿತ್ತು. ಅರಣ್ಯದ ಪಚ್ಚೆದೊಡ್ಡಿ ಭಾಗದಲ್ಲಿ ಹುಲಿಯೊಂದನ್ನು ಕಿರಾತಕರು ಮೂರು ಭಾಗಗಳಾಗಿ ತುಂಡರಿಸಿ ಹತ್ಯೆ ಮಾಡಿದ್ದರು. ಹುಲಿಯ ತಲೆಯಿಂದ ಭುಜದವರೆಗೆ ಒಂದು ಭಾಗ, ಮಧ್ಯಭಾಗ ಹಾಗೂ ಕೆಳಭಾಗವಾಗಿ ಕತ್ತರಿಸಿ ಹಾಕಲಾಗಿದ್ದ ದೃಶ್ಯ ಪರಿಸರ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿತ್ತು.

ಈ ಪ್ರಕರಣವು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಕೇವಲ ಮೂರು ತಿಂಗಳ ಅಂತರದಲ್ಲಿ ಮಲೆ ಮಹದೇಶ್ವರ ವನ್ಯಧಾಮದಲ್ಲಿ ಸ್ಥಳೀಯರ ಸೇಡಿನ ಹತ್ಯೆಗೆ ಬರೋಬ್ಬರಿ 6 ಹುಲಿಗಳು ಬಲಿಯಾಗಿರುವುದು ವನ್ಯಜೀವಿ ಸಂರಕ್ಷಣೆಯ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಜಾನುವಾರುಗಳ ಮೇಲಿನ ದಾಳಿಯಿಂದ ಕುಪಿತರಾದ ಸ್ಥಳೀಯರು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.

error: Content is protected !!