ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಸೂರಿನ ಸಾಂಸ್ಕೃತಿಕ ನಗರವನ್ನು ಬೆಚ್ಚಿಬೀಳಿಸಿದ 10 ವರ್ಷದ ಬಾಲಕಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ, ತಪ್ಪಿಸಿಕೊಂಡಿದ್ದ ಆರೋಪಿ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಖಾಸಗಿ ಬಸ್ ನಿಲ್ದಾಣದಿಂದ ಓಡಿ ಹೋಗಿದ್ದ ಈ ವಿಕೃತ ಕಾಮುಕನನ್ನು ಕೊಳ್ಳೇಗಾಲದ ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ.
ಮೈಸೂರಿನ ಖಾಸಗಿ ಬಸ್ ನಿಲ್ದಾಣದಿಂದ ಪರಾರಿಯಾಗಿದ್ದ ಆರೋಪಿ ಕಾರ್ತಿಕ್ (31) ಎಂಬಾತನನ್ನು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪತ್ತೆ ಹಚ್ಚಲಾಗಿದೆ. ಬಂಧನದ ವೇಳೆ ಆತ ತಪ್ಪಿಸಿಕೊಳ್ಳಲು ಯತ್ನಿಸಿದ್ದರಿಂದ, ಪೊಲೀಸರು ಎಚ್ಚರಿಕೆಯಾಗಿ ಅವನ ಕಾಲಿಗೆ ಗುಂಡು ಹಾರಿಸಿ ಹಿಡಿದಿದ್ದಾರೆ. ನಂತರ ಆರೋಪಿ ಮೈಸೂರಿಗೆ ಕರೆತರಲಾಗಿದ್ದು, ಕೆ.ಆರ್. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಏನಿದು ಘಟನೆ?: ಮೈಸೂರು ದಸರಾಕ್ಕೆ ಕಲಬುರಗಿಯಿಂದ ಬಲೂನ್ ವ್ಯಾಪಾರಕ್ಕಾಗಿ ಬಂದಿದ್ದ ಹಕ್ಕಿಪಿಕ್ಕಿ ಜನಾಂಗದ ಸುಮಾರು 50 ಕುಟುಂಬಗಳು ಅರಮನೆ ಮುಂಭಾಗದ ದೊಡ್ಡ ಕೆರೆ ಮೈದಾನದ ಬಳಿ ತಾತ್ಕಾಲಿಕವಾಗಿ ತಂಗಿದ್ದವು. ಮೊನ್ನೆ ಬುಧವಾರದ ರಾತ್ರಿ ಟೆಂಟ್ ನಲ್ಲಿ ಮಲಗಿದ್ದ 10 ವರ್ಷದ ಬಾಲಕಿಯನ್ನು ಆರೋಪಿ ಎಳೆದೊಯ್ದು ಅತ್ಯಾಚಾರ ಎಸಗಿ ಬಳಿಕ ಕೊಲೆ ಮಾಡಿ ಪರಾರಿಯಾಗಿದ್ದ ಪ್ರಾಥಮಿಕ ತನಿಖೆಯಲ್ಲಿ ಇದು ಅತ್ಯಾಚಾರ ಮತ್ತು ಕೊಲೆ ಪ್ರಕರಣವೆಂದು ಪೊಲೀಸರು ದೃಢಪಡಿಸಿದ್ದಾರೆ.
ಇದೇ ಪ್ರದೇಶದಲ್ಲಿ ಎರಡು ದಿನಗಳ ಹಿಂದೆ ಮತ್ತೊಂದು ಮಹಿಳೆಯ ಬರ್ಬರ ಹತ್ಯೆ ನಡೆದಿತ್ತು. ಎರಡು ದಿನಗಳ ಒಳಗೆ ಎರಡನೇ ಹತ್ಯೆ ಪ್ರಕರಣ ನಡೆದಿರುವುದರಿಂದ ಪೊಲೀಸರು ಹೆಚ್ಚಿನ ನಿಗಾವಹಿಸಿದ್ದಾರೆ. ಕಾರ್ತಿಕ್ ಎನ್ನುವ ಆರೋಪಿ ಸಿದ್ದಲಿಂಗಪುರದ ನಿವಾಸಿಯಾಗಿದ್ದು, ಮಂಡ್ಯದಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಯತ್ನ ಪ್ರಕರಣದಲ್ಲಿ ಮೊದಲು 2 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದಾನೆ. ಕೇವಲ ನಾಲ್ಕು ತಿಂಗಳ ಹಿಂದೆ ಬಿಡುಗಡೆಯಾದ ಈತನಿಂದಲೇ ಈ ಭೀಕರ ಅಪರಾಧ ನಡೆದಿರುವುದು ತನಿಖೆಯಿಂದ ತಿಳಿದುಬಂದಿದೆ.