ಹೊಸದಿಗಂತ ಡಿಜಿಟಲ್ ಡೆಸ್ಕ್:
ಧಾರ್ಮಿಕ ನಗರ ಅಯೋಧ್ಯೆಯಲ್ಲಿ ಪವಿತ್ರತೆಯನ್ನು ಕಾಪಾಡುವ ಉದ್ದೇಶದಿಂದ ಆಡಳಿತ ಮಂಡಳಿ ಮಹತ್ವದ ನಿರ್ಧಾರ ಕೈಗೊಂಡಿದೆ.
ರಾಮ ಮಂದಿರದ ಸುತ್ತಮುತ್ತ 15 ಕಿಲೋಮೀಟರ್ ವ್ಯಾಪ್ತಿಯಲ್ಲಿ ಮಾಂಸಾಹಾರ ಮತ್ತು ಮದ್ಯ ವಿತರಣೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಈ ನಿಷೇಧವು ನೇರ ಮಾರಾಟಕ್ಕೆ ಮಾತ್ರವಲ್ಲ, ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ನಡೆಯುತ್ತಿದ್ದ ವಿತರಣೆಯಿಗೂ ಅನ್ವಯಿಸುತ್ತದೆ.
‘ಪಂಚಕೋಶ ಪರಿಕ್ರಮೆ’ ಮಾರ್ಗದ ವ್ಯಾಪ್ತಿಯಲ್ಲಿ ಆನ್‌ಲೈನ್ ಆರ್ಡರ್‌ಗಳ ಮೂಲಕ ಮಾಂಸಾಹಾರ ಪೂರೈಕೆ ನಡೆಯುತ್ತಿದೆ ಎಂಬ ದೂರುಗಳು ಹೆಚ್ಚಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಕೆಲವು ಹೋಟೆಲ್‌ಗಳು ಮತ್ತು ಹೋಂಸ್ಟೇಗಳು ಅತಿಥಿಗಳಿಗೆ ಮಾಂಸ ಮತ್ತು ಮದ್ಯ ನೀಡುತ್ತಿರುವ ಬಗ್ಗೆ ಕೂಡ ಅಧಿಕಾರಿಗಳ ಗಮನಕ್ಕೆ ಬಂದಿದೆ. ಇಂತಹ ಚಟುವಟಿಕೆಗಳಿಂದ ದೂರ ಉಳಿಯುವಂತೆ ಎಲ್ಲ ಸಂಸ್ಥೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಇದನ್ನೂ ಓದಿ: KITCHEN TIPS | ಹೆಸರು ಕಾಳುಗಳು ಉದ್ದುದ್ದ ಮೊಳಕೆ ಬರಬೇಕಾ? ಈ ವಿಧಾನವನ್ನು ಅನುಸರಿಸಿ
ಈಗಾಗಲೇ ಅಯೋಧ್ಯೆ–ಫೈಜಾಬಾದ್ ಸಂಪರ್ಕಿಸುವ 14 ಕಿಲೋಮೀಟರ್ ‘ರಾಮ ಪಥ್’ ಮಾರ್ಗದಲ್ಲಿ ಮದ್ಯ ಮತ್ತು ಮಾಂಸ ಮಾರಾಟ ನಿಷೇಧಿಸಲು ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಆದರೆ ಅದು ಪರಿಣಾಮಕಾರಿಯಾಗಿ ಜಾರಿಯಾಗಿರಲಿಲ್ಲ. ಇದೀಗ ಆಹಾರ ಇಲಾಖೆಯು ಅನಧಿಕೃತ ಮಾಂಸದ ಅಂಗಡಿಗಳನ್ನು ತೆರವುಗೊಳಿಸಿದ್ದು, ಆನ್‌ಲೈನ್ ವಿತರಣೆಯ ಮೇಲೂ ಕಟ್ಟುನಿಟ್ಟಿನ ನಿಗಾ ವಹಿಸುವುದಾಗಿ ತಿಳಿಸಿದೆ. ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

