ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ ಪ್ರಮುಖ ತಂತ್ರಜ್ಞಾನ ಉತ್ಸವಗಳಲ್ಲಿ ಒಂದಾದ 28ನೇ ಆವೃತ್ತಿಯ ಬೆಂಗಳೂರು ಟೆಕ್ ಸಮಿಟ್ ಇಂದಿನಿಂದ ಅಧಿಕೃತವಾಗಿ ಆರಂಭಗೊಂಡಿದೆ. ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ಈ ಪ್ರತಿಷ್ಠಿತ ಮೂರು ದಿನಗಳ ಶೃಂಗಸಭೆಯನ್ನು ಉದ್ಘಾಟಿಸಿದರು.
ನವೆಂಬರ್ 18 ರಿಂದ 20 ರವರೆಗೆ ನಡೆಯಲಿರುವ ಈ ಸಮಿಟ್, ‘ಭವಿಷ್ಯದ ತಂತ್ರಜ್ಞಾನ’ ಎಂಬ ಆಕರ್ಷಕ ಥೀಮ್ ಅನ್ನು ಹೊಂದಿದೆ. 50ಕ್ಕೂ ಹೆಚ್ಚು ದೇಶಗಳಿಂದ ಆಗಮಿಸಿರುವ ತಂತ್ರಜ್ಞಾನ ಪರಿಣಿತರು, ಜಾಗತಿಕ ನಾಯಕರು ಮತ್ತು ವಿವಿಧ ಉದ್ಯಮಗಳ ಪ್ರಮುಖರು ಈ ಮಹತ್ವದ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಉದ್ಘಾಟನಾ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಎಂ.ಬಿ. ಪಾಟೀಲ್ ಮತ್ತು ಪ್ರಿಯಾಂಕ್ ಖರ್ಗೆ ಉಪಸ್ಥಿತರಿದ್ದರು. ಕರ್ನಾಟಕದ ತಂತ್ರಜ್ಞಾನ ಲೋಕದ ಪ್ರಮುಖರಾದ ಕಿರಣ್ ಮಜುಮ್ದಾರ್ ಶಾ, ಕ್ರಿಸ್ ಗೋಪಾಲಕೃಷ್ಣನ್, ಮತ್ತು ಪ್ರಶಾಂತ್ ಪ್ರಕಾಶ್ ಸೇರಿದಂತೆ ಹಲವು ಉದ್ಯಮ ನಾಯಕರು ವೇದಿಕೆಯನ್ನು ಅಲಂಕರಿಸಿದರು.
ಟೆಕ್ ಸಮಿಟ್ನ ಕಾರ್ಯಕ್ರಮಗಳು ತುಮಕೂರು ರಸ್ತೆಯಲ್ಲಿರುವ ಮಾದಾವರ ಮೆಟ್ರೋ ನಿಲ್ದಾಣದ ಸಮೀಪದ ಬಿಇಐಸಿ ಮೈದಾನದಲ್ಲಿ ನಡೆಯಲಿವೆ. ಈ ಮೂರು ದಿನಗಳ ಸಮಾವೇಶವು ತಂತ್ರಜ್ಞಾನದ ಹೊಸ ಆವಿಷ್ಕಾರಗಳು, ಉದ್ಯಮದ ಸವಾಲುಗಳು ಮತ್ತು ಭವಿಷ್ಯದ ಟ್ರೆಂಡ್‌ಗಳ ಕುರಿತು ಗಹನ ಚರ್ಚೆಗಳಿಗೆ ವೇದಿಕೆಯಾಗಲಿದೆ.

