ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಂಗ್ಲಾದೇಶದ ವೇಗಿ ಮುಸ್ತಾಫಿಜುರ್ ರೆಹಮಾನ್ ನನ್ನು ತಂಡದಿಂದ ಬಿಡುಗಡೆ ಮಾಡಿದ ವಿಚಾರವನ್ನು ಮುಂದಿಟ್ಟು, ಭಾರತ ಸರ್ಕಾರದ ನಿಲುವಿನ ವಿರುದ್ಧ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕಟುವಾಗಿ ಟೀಕೆ ಮಾಡಿದ್ದಾರೆ. ಬಾಂಗ್ಲಾದೇಶ ಮತ್ತು ಅದರ ನಾಯಕತ್ವಕ್ಕೆ ಸಂಬಂಧಿಸಿದ ವಿಷಯಗಳನ್ನು ನಿಭಾಯಿಸುವಲ್ಲಿ ಭಾರತ ದ್ವಂದ್ವ ಮಾನದಂಡ ಅನುಸರಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಪಹಲ್ಗಾಮ್ ದಾಳಿ ನಂತರವೂ ಭಾರತ–ಪಾಕಿಸ್ತಾನ ನಡುವೆ ಕ್ರಿಕೆಟ್ ಪಂದ್ಯಗಳು ನಡೆದ ಉದಾಹರಣೆ ನೀಡಿದ ಓವೈಸಿ, ಬಾಂಗ್ಲಾದೇಶದ ಆಟಗಾರನನ್ನು ಮಾತ್ರ ವಾಪಸ್ ಕಳುಹಿಸುವುದು ಅಸಂಗತ ಕ್ರಮ ಎಂದು ಹೇಳಿದ್ದಾರೆ. ನೆರೆ ದೇಶದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ಹಿಂಸಾಚಾರದ ಹಿನ್ನೆಲೆಯಲ್ಲಿ, ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಭಾಗವಾಗಿದ್ದ ಮುಸ್ತಾಫಿಜುರ್ ರೆಹಮಾನ್ ಅವರನ್ನು ಬಿಡುಗಡೆ ಮಾಡುವಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಕಳೆದ ವಾರ ಸೂಚಿಸಿತ್ತು.
ಇದನ್ನೂ ಓದಿ: FOOD | ನಾಲಗೆಗೆ ರುಚಿ ಕೊಡು ನೆಲ್ಲಿಕಾಯಿ ತಿಳಿಸಾರು!
ಈ ನಿರ್ಧಾರಕ್ಕೆ ಸಂಬಂಧಿಸಿ ಕಾಂಗ್ರೆಸ್ ಸಂಸದ ಶಶಿ ತರೂರ್ ಸೇರಿದಂತೆ ಹಲವು ನಾಯಕರು ಕ್ರೀಡೆ ಮತ್ತು ರಾಜಕೀಯವನ್ನು ಬೆರೆಸಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದೇ ವಿಚಾರವನ್ನು ಮುಂದುವರೆಸಿದ ಓವೈಸಿ, ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಪ್ರತಿಭಟನೆಗಳ ನಡುವೆ ತಮ್ಮ ದೇಶ ತೊರೆದು ಭಾರತದಲ್ಲಿ ವಾಸಿಸುತ್ತಿರುವಾಗ, ಅವರನ್ನು ಯಾಕೆ ಅದೇ ರೀತಿಯಲ್ಲಿ ವಾಪಸ್ ಕಳುಹಿಸಲಿಲ್ಲ ಎಂದು ಪ್ರಶ್ನಿಸಿದರು.

