ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಿ20 ವಿಶ್ವಕಪ್ ಟೂರ್ನಿಯ ಪಂದ್ಯವನ್ನಾಡಲು ಬಾಂಗ್ಲಾದೇಶ ತಂಡ ಭಾರತಕ್ಕೆ ಪ್ರಯಾಣಿಸುವುದಿಲ್ಲ ಎಂದು ಭಾನುವಾರ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ದೃಢಪಡಿಸಿದೆ.
ಐಪಿಎಲ್ ಕ್ಕಿಂತ ಮೊದಲು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡದಿಂದ ಮುಸ್ತಾಫಿಜುರ್ ರೆಹಮಾನ್ ಅವರನ್ನು ಬಿಡುಗಡೆ ಮಾಡಿದ ವಿವಾದದ ಮಧ್ಯೆ ಈ ನಿರ್ಧಾರ ಬಂದಿದೆ.
ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ಖಂಡಿಸಬೇಕೆನ್ನುವ ನಿಲುವು ತಾಳಿರುವ ಬಿಸಿಸಿಐ, ಬಾಂಗ್ಲಾದ ತಾರಾ ವೇಗಿ ಮುಸ್ತಾಫಿಜುರ್ ರಹಮಾನ್‌ರನ್ನು ಮುಂಬರುವ ಐಪಿಎಲ್‌ನಿಂದ ಹೊರಹಾಕಿದೆ. ಇದರ ಬೆನ್ನಲ್ಲೇ ಬಾಂಗ್ಲಾ ಕ್ರಿಕೆಟ್ ಮಂಡಳಿ, ಬಾಂಗ್ಲಾದೇಶ ತಂಡವನ್ನು ಭಾರತಕ್ಕೆ ಕಳುಹಿಸದಿರಲು ನಿರ್ಧರಿಸಿದೆ. ಹಾಗೆಯೇ ಬಾಂಗ್ಲಾ ತಂಡದ ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸುವಂತೆ ಐಸಿಸಿಗೆ (ICC) ಇಮೇಲ್ ಮಾಡಿದೆ. ಆದರೆ ಬಾಂಗ್ಲಾದೇಶದ ಈ ಬೆದರಿಕೆಗೆ ತಕ್ಕ ಪ್ರತ್ಯುತ್ತರ ನೀಡಿರುವ ಬಿಸಿಸಿಐ (BCCI), ಈಗ ಟಿ20 ವಿಶ್ವಕಪ್ ವೇಳಾಪಟ್ಟಿಯಲ್ಲಿ ಬದಲಾವಣೆ ಸಾಧ್ಯವಿಲ್ಲ ಎಂದಿದೆ.
ಭಾರತದ ನೆಲದಲ್ಲಿ ಆಡುವುದಿಲ್ಲ
ಬಾಂಗ್ಲಾ ಕ್ರಿಕೆಟಿಗ ಮುಸ್ತಾಫಿಜುರ್ ರೆಹಮಾನ್ರನ್ನು ಐಪಿಎಲ್‌ನಿಂದ ಹೊರಗಿಟ್ಟಿರುವುದರಿಂದ ಕೆರಳಿರುವ ಬಾಂಗ್ಲಾ ಕ್ರಿಕೆಟ್ ಮಂಡಳಿ, ಭಾರತಕ್ಕೆ ತನ್ನ ತಂಡವನ್ನು ಕಳುಹಿಸದಿರಲು ನಿರ್ಧರಿಸಿದೆ. ವಾಸ್ತವವಾಗಿ ಬಾಂಗ್ಲಾ ತಂಡವನ್ನು ಭಾರತಕ್ಕೆ ಕಳುಹಿಸುವುದರ ಬಗ್ಗೆ ಚರ್ಚಿಸಲು 17 ಬಿಸಿಬಿ ನಿರ್ದೇಶಕರು ಸಭೆ ಸೇರಿದ್ದರು. ಈ ಸಭೆಯಲ್ಲಿ ಟಿ20 ವಿಶ್ವಕಪ್‌ಗೆ ಸಂಬಂಧಿಸಿದಂತೆ ಹೊಸ ನಿರ್ಧಾರ ತೆಗೆದುಕೊಂಡಿದ್ದು, ಬಾಂಗ್ಲಾದೇಶ ತನ್ನ ಯಾವುದೇ ವಿಶ್ವಕಪ್ ಪಂದ್ಯಗಳನ್ನು ಭಾರತದ ನೆಲದಲ್ಲಿ ಆಡದಿರಲು ನಿರ್ಧರಿಸಲಾಗಿದೆ. ಹಾಗೆಯೇ ಭದ್ರತಾ ಕಾರಣಗಳಿಂದಾಗಿ, ಟಿ20 ವಿಶ್ವಕಪ್‌ಗಾಗಿ ತಂಡವನ್ನು ಭಾರತಕ್ಕೆ ಕಳುಹಿಸಲು ಸಾಧ್ಯವಿಲ್ಲ ಎಂದು ಬಿಸಿಬಿ, ಐಸಿಸಿಗೆ ಮೇಲ್ ಮಾಡಿದೆ.
ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಕಳುಹಿಸಿರುವ ಈಮೇಲ್ಗೆ ಇದುವರೆಗೆ ಐಸಿಸಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆದಾಗ್ಯೂ ಬಾಂಗ್ಲಾದೇಶ ತಂಡದ ಪಂದ್ಯಗಳನ್ನು ಸ್ಥಳಾಂತರಿಸುವ ಕಲ್ಪನೆಯನ್ನು ಬಿಸಿಸಿಐ ತಳ್ಳಿಹಾಕಿದ್ದು, ವೇಳಾಪಟ್ಟಿಯನ್ನು ಈಗ ಬದಲಿಸುವುದು ವ್ಯವಸ್ಥಾಪನಾ ದೃಷ್ಟಿಯಿಂದ ಅಸಾಧ್ಯ ಎಂದಿದೆ.

