Thursday, September 25, 2025

ಟೀಮ್ ಇಂಡಿಯಾ ದಾಳಿಗೆ ಬೆದರಿದ ಬಾಂಗ್ಲಾ: ಫೈನಲ್​ಗೇರಿದ ಸೂರ್ಯ ಪಡೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಏಷ್ಯಾಕಪ್ ಸೂಪರ್ 4 ಹಂತದಲ್ಲಿ ಭಾರತ ಮತ್ತೊಂದು ಅದ್ಭುತ ಗೆಲುವು ದಾಖಲಿಸಿದೆ. ಬಾಂಗ್ಲಾದೇಶ ವಿರುದ್ಧದ ತನ್ನ ಎರಡನೇ ಪಂದ್ಯದಲ್ಲಿ ಜಯಗಳಿಸಿದ ಟೀಂ ಇಂಡಿಯಾ ಅಜೇಯ ತಂಡವಾಗಿ 12ನೇ ಬಾರಿಗೆ ಏಷ್ಯಾಕಪ್ ಫೈನಲ್‌ಗೆ ಪ್ರವೇಶಿಸಿದೆ. ಇನ್ನೂ ಒಂದು ಲೀಗ್ ಪಂದ್ಯ ಬಾಕಿ ಉಳಿದಿದ್ದರೂ, ಈ ಗೆಲುವಿನಿಂದ ಭಾರತ ತನ್ನ ಫೈನಲ್ ಸ್ಥಾನವನ್ನು ಮುಂಚಿತವಾಗಿಯೇ ಖಚಿತಪಡಿಸಿಕೊಂಡಿದೆ.

ಮೊದಲು ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಉತ್ತಮ ಪ್ರಾರಂಭ ಪಡೆಯಿತು. ಅಭಿಷೇಕ್ ಶರ್ಮಾ ಹಾಗೂ ಶುಭ್‌ಮನ್ ಗಿಲ್ ನಡುವಿನ 77 ರನ್‌ಗಳ ಜೋಡಿ ಭಾರತಕ್ಕೆ ಬಲ ನೀಡಿತು. ಅಭಿಷೇಕ್ ಕೇವಲ 37 ಎಸೆತಗಳಲ್ಲಿ 75 ರನ್ ಗಳಿಸಿ ಅಬ್ಬರಿಸಿದರು. ಗಿಲ್ 29 ರನ್‌ಗಳ ಕೊಡುಗೆ ನೀಡಿದರು. ಹಾರ್ದಿಕ್ ಪಾಂಡ್ಯ 38 ರನ್ ಗಳಿಸಿದರೂ ಉಳಿದ ಬ್ಯಾಟ್ಸ್‌ಮನ್‌ಗಳಿಂದ ಹೆಚ್ಚು ನೆರವು ಸಿಗಲಿಲ್ಲ. ಅಂತಿಮವಾಗಿ ಭಾರತ 20 ಓವರ್‌ಗಳಲ್ಲಿ 168 ರನ್ ಕಲೆಹಾಕಿತು. ಬಾಂಗ್ಲಾದೇಶ ಪರ ರಿಷಾದ್ ಹುಸೇನ್ ಎರಡು ವಿಕೆಟ್ ಪಡೆದರೆ, ಉಳಿದ ಬೌಲರ್‌ಗಳು ತಲಾ ಒಂದು ವಿಕೆಟ್ ಪಡೆದರು.

ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ಆರಂಭದಲ್ಲೇ ಒತ್ತಡಕ್ಕೆ ಸಿಲುಕಿತು. ಜಸ್ಪ್ರೀತ್ ಬುಮ್ರಾ ಮೊದಲ ಓವರ್‌ನಲ್ಲೇ ವಿಕೆಟ್ ಉರುಳಿಸಿ ತಂಡಕ್ಕೆ ಮುನ್ನಡೆ ನೀಡಿದರು. ಮಧ್ಯಭಾಗದಲ್ಲಿ ವರುಣ್ ಚಕ್ರವರ್ತಿ ಮತ್ತು ಕುಲ್ದೀಪ್ ಯಾದವ್ ಬಾಂಗ್ಲಾದೇಶದ ಬ್ಯಾಟಿಂಗ್ ಸಾಲನ್ನು ಕಾಡಿದರು. ವರುಣ್ ಎರಡು ವಿಕೆಟ್ ಪಡೆದರೆ, ಕುಲ್ದೀಪ್ ಮೂರು ವಿಕೆಟ್ ಕಬಳಿಸಿದರು. ಇಬ್ಬರೂ ಸೇರಿ ಎಂಟು ಓವರ್‌ಗಳಲ್ಲಿ ಕೇವಲ 47 ರನ್ ನೀಡಿ ಐದು ವಿಕೆಟ್ ಉರುಳಿಸಿದರು. ಇದರಿಂದ ಬಾಂಗ್ಲಾದೇಶ 41 ರನ್ ಅಂತರದಿಂದ ಸೋಲು ಕಂಡಿತು.

ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ತನ್ನ ಪ್ರಾಬಲ್ಯವನ್ನು ಮತ್ತೊಮ್ಮೆ ತೋರಿಸಿದೆ. ಇದುವರೆಗೆ ಭಾರತ ಎಂಟು ಬಾರಿ ಚಾಂಪಿಯನ್ ಆಗಿದೆ. 1984, 1988, 1990-91, 1995, 2010, 2016, 2018 ಮತ್ತು 2023 ರಲ್ಲಿ ಟ್ರೋಫಿ ಎತ್ತಿದ ಭಾರತ ಈಗ 12ನೇ ಬಾರಿಗೆ ಫೈನಲ್ ಪ್ರವೇಶಿಸಿದೆ.

ಇದನ್ನೂ ಓದಿ