March 28, 2026
Saturday, March 28, 2026
spot_img

ಐಪಿಎಲ್ ಕ್ರೇಜ್‌ಗೆ ಮಣಿದ ಬಾಂಗ್ಲಾ: ಭಾರತದೊಂದಿಗೆ ಸ್ನೇಹದ ಹಸ್ತ ಚಾಚಿದ ಹೊಸ ಸರ್ಕಾರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಕ್ರಿಕೆಟ್ ರಾಜತಾಂತ್ರಿಕತೆಯಲ್ಲಿ ಮಹತ್ವದ ಬದಲಾವಣೆಯಾಗಿದೆ. ಕಳೆದ ಕೆಲವು ಸಮಯದಿಂದ ಐಪಿಎಲ್ ಪ್ರಸಾರದ ಮೇಲೆ ಹೇರಲಾಗಿದ್ದ ನಿಷೇಧವನ್ನು ಬಾಂಗ್ಲಾದೇಶದ ನೂತನ ಸರ್ಕಾರ ಅಧಿಕೃತವಾಗಿ ತೆರವುಗೊಳಿಸಿದೆ. ಇಂದಿನಿಂದಲೇ 2026ರ ಐಪಿಎಲ್ ಸೀಸನ್ ಆರಂಭವಾಗುತ್ತಿದ್ದು, ಬಾಂಗ್ಲಾದ ಕ್ರಿಕೆಟ್ ಅಭಿಮಾನಿಗಳಿಗೆ ಇದು ದೊಡ್ಡ ಮಟ್ಟದ ಸಿಹಿಸುದ್ದಿಯಾಗಿದೆ.

ಈ ಹಿಂದೆ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆದ ದೌರ್ಜನ್ಯವನ್ನು ಖಂಡಿಸಿದ್ದ ಬಿಸಿಸಿಐ, ಐಪಿಎಲ್‌ನಿಂದ ಬಾಂಗ್ಲಾ ಆಟಗಾರರನ್ನು ಹೊರಗಿಡುವ ಕಠಿಣ ನಿರ್ಧಾರ ತೆಗೆದುಕೊಂಡಿತ್ತು. ಇದರ ಭಾಗವಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿದ್ದ ಏಕೈಕ ಬಾಂಗ್ಲಾ ವೇಗಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ಲೀಗ್‌ನಿಂದ ಕೈಬಿಡಲಾಗಿತ್ತು. ಬಿಸಿಸಿಐನ ಈ ಕ್ರಮಕ್ಕೆ ಅಂದಿನ ಮಧ್ಯಂತರ ಸರ್ಕಾರ ತೀವ್ರ ಆಕ್ರೋಶ ವ್ಯಕ್ತಪಡಿಸಿ, ದೇಶದಲ್ಲಿ ಐಪಿಎಲ್ ಪ್ರಸಾರವನ್ನೇ ನಿಷೇಧಿಸಿತ್ತು. ಅಲ್ಲದೆ, ಟಿ20 ವಿಶ್ವಕಪ್‌ನಿಂದಲೂ ತನ್ನ ತಂಡವನ್ನು ಹಿಂತೆಗೆದುಕೊಂಡು ಹಠಮಾರಿ ಧೋರಣೆ ಅನುಸರಿಸಿತ್ತು.

ಇದೀಗ ಬಾಂಗ್ಲಾದೇಶದಲ್ಲಿ ಆಡಳಿತ ಬದಲಾಗಿದ್ದು, ಹೊಸ ಸರ್ಕಾರವು ಭಾರತದೊಂದಿಗೆ ಹದಗೆಟ್ಟಿರುವ ಸಂಬಂಧವನ್ನು ಸುಧಾರಿಸಲು ಮುಂದಾಗಿದೆ. ಈ ಕುರಿತು ಮಾಹಿತಿ ನೀಡಿದ ಮಾಹಿತಿ ಮತ್ತು ಪ್ರಸಾರ ಸಚಿವ ಜಹೀರ್ ಉದ್ದೀನ್ ಸ್ವಪನ್, “ಐಪಿಎಲ್ ಪ್ರಸಾರದ ಮೇಲೆ ಯಾವುದೇ ನಿರ್ಬಂಧಗಳಿಲ್ಲ. ಸ್ಟಾರ್ ಸ್ಪೋರ್ಟ್ಸ್ ಸೇರಿದಂತೆ ಯಾವುದೇ ಪ್ರಸಾರ ಕಂಪನಿಗಳು ಅಧಿಕೃತವಾಗಿ ಅನುಮತಿ ಕೋರಿ ಅರ್ಜಿ ಸಲ್ಲಿಸಿದರೆ ತಕ್ಷಣವೇ ಒಪ್ಪಿಗೆ ನೀಡಲಾಗುವುದು,” ಎಂದು ತಿಳಿಸಿದ್ದಾರೆ.

ಬಾಂಗ್ಲಾ ಸರ್ಕಾರದ ಈ ಹಸಿರು ನಿಶಾನೆಯು ಕೇವಲ ಕ್ರೀಡೆಗೆ ಸೀಮಿತವಾಗಿರದೆ, ಉಭಯ ರಾಷ್ಟ್ರಗಳ ನಡುವಿನ ರಾಜಕೀಯ ಬಿಕ್ಕಟ್ಟು ಶಮನವಾಗುವ ಸೂಚನೆಯನ್ನು ನೀಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !