ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಕಾಂಗ್ರೆಸ್ ಸರ್ಕಾರ ಸಂಪೂರ್ಣ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಹಣ ಹೊಂದಿಸಲು ಕಂಡ ಕಂಡಲ್ಲಿ ತೆರಿಗೆ ವಿಧಿಸುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತೀವ್ರವಾಗಿ ಟೀಕಿಸಿದ್ದಾರೆ.
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಸರ್ಕಾರದ ಧನದಾಹಕ್ಕೆ ಈಗ ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳೂ ಬಲಿಯಾಗುತ್ತಿವೆ. ಈ ಮೂಲಕ ಪ್ರಧಾನಿ ಮೋದಿಯವರ ‘ಆತ್ಮನಿರ್ಭರ ಭಾರತ’ದ ಕನಸಿಗೆ ರಾಜ್ಯ ಸರ್ಕಾರ ಅಡ್ಡಿಪಡಿಸುತ್ತಿದೆ” ಎಂದು ಆಕ್ರೋಶ ಹೊರಹಾಕಿದರು.
ವಿಶ್ವದಾದ್ಯಂತ ತೈಲ ಬಿಕ್ಕಟ್ಟು ಎದುರಾಗಿರುವಾಗ ಕೇಂದ್ರ ಸರ್ಕಾರ ನವೀಕರಿಸಬಹುದಾದ ಇಂಧನಕ್ಕೆ ಒತ್ತು ನೀಡುತ್ತಿದೆ. ಆದರೆ, ರಾಜ್ಯ ಸರ್ಕಾರ ಈ ಹಿಂದೆ ನೀಡಿದ್ದ ತೆರಿಗೆ ವಿನಾಯಿತಿಗಳನ್ನು ಹಿಂಪಡೆಯುವ ಮೂಲಕ ಜನರನ್ನು ಮತ್ತೆ ಪೆಟ್ರೋಲ್-ಡೀಸೆಲ್ ವಾಹನಗಳತ್ತ ತಳ್ಳುತ್ತಿದೆ. ಇದು ಪರಿಸರ ಮತ್ತು ಆರ್ಥಿಕತೆ ಎರಡಕ್ಕೂ ಮಾರಕ ಎಂದು ಅವರು ಎಚ್ಚರಿಸಿದರು.



