Wednesday, January 28, 2026
Wednesday, January 28, 2026
spot_img

ಖಾಕಿ ಪಡೆಗೆ ‘ಬ್ಯಾನರ್’ ಶಾಕ್: ಬಳ್ಳಾರಿಯಲ್ಲಿ ಮುಂದುವರೆದ ಪೊಲೀಸ್ ಅಧಿಕಾರಿಗಳ ಎತ್ತಂಗಡಿ ಪರ್ವ

ಹೊಸದಿಗಂತ ಬಳ್ಳಾರಿ:

ನಗರದಲ್ಲಿ ನಡೆದ ಬ್ಯಾನರ್ ಗಲಭೆ ಪ್ರಕರಣವು ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಘಟನೆಯನ್ನು ನಿಯಂತ್ರಿಸುವಲ್ಲಿ ವಿಫಲರಾದ ಆರೋಪದ ಮೇಲೆ ಈಗ ಬಳ್ಳಾರಿ ನಗರ ಡಿವೈಎಸ್ಪಿ ಚಂದ್ರಕಾಂತ್ ನಂದಾರೆಡ್ಡಿ ಅವರನ್ನು ಸ್ಥಳ ನಿಯೋಜನೆ ಮಾಡದೆ ವರ್ಗಾವಣೆಗೊಳಿಸಿ ಸರ್ಕಾರ ಆದೇಶಿಸಿದೆ. ಅವರ ಜಾಗಕ್ಕೆ 2023ರ ಬ್ಯಾಚ್‌ನ ಯುವ ಐಪಿಎಸ್ ಅಧಿಕಾರಿ ಯಶ್ ಕುಮಾರ್ ಶರ್ಮಾ ಅವರನ್ನು ನೇಮಕ ಮಾಡಲಾಗಿದೆ.

ಗಲಭೆಯ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಹತೋಟಿಗೆ ತರುವಲ್ಲಿ ಸ್ಥಳೀಯ ಪೊಲೀಸ್ ಆಡಳಿತ ವಿಫಲವಾಗಿದೆ ಎಂದು ಎಡಿಜಿಪಿ ಹೀತೇಂದ್ರ ಅವರು ಸರ್ಕಾರಕ್ಕೆ ಸಲ್ಲಿಸಿದ ವರದಿಯೇ ಈ ವರ್ಗಾವಣೆಗೆ ಪ್ರಮುಖ ಕಾರಣ ಎನ್ನಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ದೊಡ್ಡ ಮಟ್ಟದ ಬದಲಾವಣೆಗಳಾಗಿವೆ:

ಎಸ್ಪಿ ಪವನ್ ನೆಜ್ಜೂರ್: ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳಲ್ಲಿ ಅಮಾನತು.

ಐಜಿಪಿ ವರ್ತಿಕಾ ಕಟಿಯಾರ್: ಬಳ್ಳಾರಿ ವಲಯದಿಂದ ಎತ್ತಂಗಡಿ.

ಡಿವೈಎಸ್ಪಿ ಚಂದ್ರಕಾಂತ್ ನಂದಾರೆಡ್ಡಿ: ಈಗ ಸ್ಥಳ ನಿಯೋಜನೆಯಿಲ್ಲದೆ ವರ್ಗಾವಣೆ.

ಮಾಜಿ ಸಚಿವರಾದ ಗಾಲಿ ಜನಾರ್ದನ ರೆಡ್ಡಿ ಮತ್ತು ಬಿ. ಶ್ರೀರಾಮುಲು ನೇತೃತ್ವದ ಬಿಜೆಪಿ ನಾಯಕರು, “ಪೊಲೀಸ್ ಅಧಿಕಾರಿಗಳು ಶಾಸಕ ನಾರಾ ಭರತ್ ರೆಡ್ಡಿ ಅವರ ಪರವಾಗಿ ಕೆಲಸ ಮಾಡುತ್ತಿದ್ದಾರೆ” ಎಂದು ಗಂಭೀರ ಆರೋಪ ಮಾಡಿದ್ದರು. ಅಲ್ಲದೆ, ಡಿವೈಎಸ್ಪಿ ನಂದಾರೆಡ್ಡಿ ಹಾಗೂ ಎಎಸ್ಪಿ ರವಿಕುಮಾರ್ ಅವರನ್ನು ಕೂಡಲೇ ಜಿಲ್ಲೆಯಿಂದ ಹೊರಹಾಕಬೇಕೆಂದು ಪಟ್ಟು ಹಿಡಿದಿದ್ದರು.

ಎಡಿಜಿಪಿ ವರದಿಯ ಆಧಾರದ ಮೇಲೆ ಮುಂದಿನ ದಿನಗಳಲ್ಲಿ ಇಲಾಖೆಯ ಇನ್ನೂ ಕೆಲವು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ ದಟ್ಟವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !