Tuesday, January 13, 2026
Tuesday, January 13, 2026
spot_img

ಶಬರಿಮಲೆ ಯಾತ್ರೆ ಮುಗಿಸಿ ವಾಪಸು ಬರುವ ವೇಳೆ ಅಪಘಾತ: ಬಂಟ್ವಾಳದ ಬಾಲಕ ಸಾವು

ಹೊಸದಿಗಂತ ವರದಿ, ಬಂಟ್ವಾಳ:

ಶಬರಿಮಲೆ ಯಾತ್ರೆಗೆ ತೆರಳಿ ಅಯ್ಯಪ್ಪನ ದರುಶನ ಮುಗಿಸಿ ವಾಪಸು ಊರಿಗೆ ಬರುವ ವೇಳೆ ಲಾರಿ ಡಿಕ್ಕಿಯಾಗಿ ಬಂಟ್ವಾಳದ ಅಯ್ಯಪ್ಪ ಮಾಲಾಧಾರಿ ಬಾಲಕನೋರ್ವ ಮೃತಪಟ್ಟ ಘಟನೆ ಕೇರಳ ರಾಜ್ಯದ ಕ್ಯಾಲಿಕಟ್ ಸಮೀಪದ ಕೋಟೆಕಲ್ ಎಂಬಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದೆ.

ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದ ದುರ್ಗಾನಗರ ಸಮೀಪದ ಕೊಪ್ಪಳ ನಿವಾಸಿ ಅಶೋಕ್ ಪೂಜಾರಿ ಅವರ ಪುತ್ರ ಲಕ್ಮೀಶ್ ಪೂಜಾರಿ( 15) ಮೃತಪಟ್ಟ ದುರ್ದೈವಿ ಬಾಲಕನಾಗಿದ್ದಾನೆ. ಈತ ಸಿದ್ದಕಟ್ಟೆ ಶಾಲೆಯ 9 ನೇ ತರಗತಿಯ ವಿದ್ಯಾರ್ಥಿಯಾಗಿದ್ದಾನೆ.

ಕುರಿಯಾಳ ಗ್ರಾಮದ ದುರ್ಗಾನಗರ ನಿವಾಸಿಗಳಾದ ಅಶೋಕ್ ಪೂಜಾರಿ, ಸಂತೋಷ್ ಪೂಜಾರಿ, ಸಚಿನ್,ಗೋಪಾಲಪೂಜಾರಿ, ಲಕ್ಮೀಶ ಪೂಜಾರಿ, ಕಿರಣ್ ,ವರದ್ ರಾಜ್ ಅವರು ಸೇರಿ 7 ಮಂದಿ ಮಾಲಾಧಾರಿಗಳು ಇನ್ನೋವಾ ಕಾರಿನಲ್ಲಿ ಒಟ್ಟು 7 ಮಂದಿ ಕುರಿಯಾಳದಿಂದ ಶಬರಿಮಲೆಗೆ ತೆರಳಿದ್ದರು.

ಬಾಲಕ ಲಕ್ಷ್ಮೀಶ್ ತನ್ನ ತಂದೆ ಅಶೋಕ್ ಪೂಜಾರಿ ಜೊತೆ ಶಬರಿಮಲೆಗೆ ಜ.7 ರಂದು ತೆರಳಿದ್ದರು. ದೇವರ ದರುಶನ ಮುಗಿಸಿ ವಾಪಸು ಜ.9 ರಂದು ಊರಿಗೆ ಬರುತ್ತಿದ್ದ ವೇಳೆ ಕೊಟೆಕಲ್ ಎಂಬಲ್ಲಿ ಇವರ ಕಾರು ಕೆಟ್ಟುಹೋದುದರಿಂದ ಅಶೋಕ್ ಪೂಜಾರಿ ಒಬ್ಬರು ಕಾರಿನೊಳಗೆ ಕುಳಿತಿದ್ದರೆ ಉಳಿದಂತೆ ಚಾಲಕ ಸೇರಿ ಇತರರು ಕಾರಿನ ಮುಂಭಾಗ ಬೊನೆಟ್ ತೆರೆದು ಕಾರಿ‌ನ ರಿಪೇರಿಯಲ್ಲಿ ನಿರತರಾಗಿದ್ದರೆನ್ನಲಾಗಿದೆ. ನುಸುಕಿನ ಜಾವ ಸುಮಾರು 2 ಗಂಟೆಯ ವೇಳೆಗೆ ಲಾರಿಯೊಂದು ರಸ್ತೆ ಬದಿಯಲ್ಲಿ ನಿಲ್ಲಿಸಿ ರಿಪೇರಿ ನಿರತರಾಗಿದ್ದವರಿಗೆ ನೇರವಾಗಿ ಹಿಂಬದಿಯಿಂದ ಬಂದು ಡಿಕ್ಕಿ ಹೊಡೆದಿದೆಯೆನ್ನಲಾಗಿದೆ.

ಡಿಕ್ಕಿಯ ತೀವ್ರತೆಗೆ ಎಲ್ಲರೂ ರಸ್ತೆಗೆ ಎಸೆಯಲ್ಪಟ್ಟಿದ್ದು , ಈ ಸಂದರ್ಭ ಬಾಲಕ ಲಕ್ಷೀಶ್ ಅದೇ ಲಾರಿಯಡಿಗೆ ಸಿಲುಕಿ ದಾರುಣವಾಗಿ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಉಳಿದಂತೆಮಾಲಾಧಾರಿ ವರದರಾಜ್ ಎಂಬವರು ಗಂಭೀರ ಸ್ವರೂಪದ ಗಾಯಗೊಂಡಿದ್ದು,ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರು ಸಣ್ಣಪುಟ್ಟ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Most Read

error: Content is protected !!