Friday, September 19, 2025

ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್‌ಗೆ ಆಹ್ವಾನ: ಸುಪ್ರೀಂನಲ್ಲೂ ಅರ್ಜಿ ವಜಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬುಕರ್‌ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್‌ ಮೈಸೂರು ದಸರಾ ಉದ್ಘಾಟನೆ ಮಾಡುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ.

ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿತ್ತು. ಇದನ್ನು ಪ್ರಶ್ನಿಸಿ ಸಂಸದ ಪ್ರತಾಪ್‌ ಸಿಂಹ ಸೇರಿದಂತೆ ಅನೇಕರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ರಾಜ್ಯ ಸರ್ಕಾರದ ನಿರ್ಧಾರವನ್ನು ಕರ್ನಾಟಕ ಹೈಕೋರ್ಟ್‌ ಅನುಮೋದಿಸಿತ್ತು. ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು ಅರ್ಜಿಗಳನ್ನು ವಜಾ ಮಾಡಿದೆ.

ಅರ್ಜಿದಾರರ ಪರ ಹಿರಿಯ ವಕೀಲ ಪಿ.ಬಿ. ಸುರೇಶ್, ಹಿಂದೂಯೇತರ ವ್ಯಕ್ತಿಗೆ ಪೂಜೆಗಳನ್ನು ಮಾಡಲು ಅವಕಾಶ ನೀಡಲಾಗುವುದಿಲ್ಲ ಎಂದು ವಾದಿಸಿದರು. ದೇವಸ್ಥಾನದ ಒಳಗೆ ಪೂಜೆ ಮಾಡುವುದನ್ನು ಜಾತ್ಯತೀತ ಕ್ರಿಯೆ ಎಂದು ಪರಿಗಣಿಸಲಾಗುವುದಿಲ್ಲ. ಇದು ಸಂಪೂರ್ಣವಾಗಿ ರಾಜಕೀಯ. ಧಾರ್ಮಿಕ ಚಟುವಟಿಕೆಗಾಗಿ ಅವರನ್ನು ದೇವಸ್ಥಾನದ ಒಳಗೆ ಕರೆತರಲು ಯಾವುದೇ ಕಾರಣವಿಲ್ಲ ಎಂದು ವಾದ ಮಂಡಿಸಿದರು.

ದಸರಾ ಉದ್ಘಾಟನೆಗೆ ಆಹ್ವಾನಿತರಾದವರು ಹಿಂದೆ ಕೆಲವು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಅಂತಹವರನ್ನು ಆಹ್ವಾನಿಸಿರುವುದು ಸರಿಯಲ್ಲ ಎಂದು ಪಿ.ಬಿ.ಸುರೇಶ್‌ ವಾದಿಸಿದರು. ವಾದದ ಸಂದರ್ಭದಲ್ಲೇ ನ್ಯಾಯಮೂರ್ತಿ ನಾಥ್‌ ಅವರು, ಅರ್ಜಿ ವಜಾಗೊಳಿಸಲಾಗಿದೆ ಎಂದು ಆದೇಶಿಸಿದರು.

ಇದನ್ನೂ ಓದಿ