ಹೊಸದಿಗಂತ ಔರಾದ್:
ತಾಲ್ಲೂಕಿನ ಬೋರಾಳ ಗ್ರಾಮದಲ್ಲಿ ಮಂಗಳವಾರ ಸಂಭವಿಸಿದ ಭೀಕರ ಅಗ್ನಿ ಆಕಸ್ಮಿಕದಲ್ಲಿ ಕುರಿಗಾಹಿ ಸೇರಿ 45 ಕುರಿಗಳು ಸಜೀವ ದಹನವಾದ ಘಟನೆ ನಡೆದಿದೆ.
ಸ್ಥಳೀಯ ನಿವಾಸಿ ಶಂಕರ ಮೇತ್ರೆ (65) ಎಂಬುವವರು ತಮ್ಮ ಕುರಿಗಳೊಂದಿಗೆ ಕೊಟ್ಟಿಗೆಯಲ್ಲಿದ್ದಾಗ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಬೆಂಕಿ ಇಡೀ ಶೆಡ್ಗೆ ವ್ಯಾಪಿಸಿದ್ದು, ಹೊರಬರಲಾರದೆ ಶಂಕರ ಮೇತ್ರೆ ಹಾಗೂ ಕೊಟ್ಟಿಗೆಯಲ್ಲಿದ್ದ 45 ಕುರಿಗಳು ಬೆಂಕಿಗೆ ಆಹುತಿಯಾಗಿವೆ. ಈ ಘಟನೆಯಲ್ಲಿ ಕುರಿಗಳ ಶೆಡ್ ಸಂಪೂರ್ಣ ಭಸ್ಮವಾಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಹಾನಿ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ವಿಷಯ ತಿಳಿಯುತ್ತಿದ್ದಂತೆಯೇ ತಹಶೀಲ್ದಾರ್ ಮಹೇಶ ಪಾಟೀಲ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ ಪೂಜಾರಿ, ಸಿಪಿಐ ರಘುವೀರಸಿಂಗ ಠಾಕೂರ್ ಹಾಗೂ ಪಿಎಸ್ ಐ ವಸೀಮ ಪಟೇಲ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.



