ಸ್ನಾನ ಎಂದರೆ ಕೇವಲ ದೇಹದ ಮೇಲೆ ಸುರಿಯುವ ನೀರು ಮಾತ್ರವಲ್ಲ; ಇದು ದೇಹ ಮತ್ತು ಮನಸ್ಸನ್ನು ಏಕಕಾಲದಲ್ಲಿ ಶುದ್ಧೀಕರಿಸುವ ಪ್ರಕ್ರಿಯೆ. ನಿರಂತರ ಸ್ನಾನವು ದೈನಂದಿನ ಆರೋಗ್ಯವನ್ನು ಸುಧಾರಿಸುವಂತೆ ಕೆಲಸ ಮಾಡುತ್ತದೆ. ಉತ್ತಮ ಸ್ನಾನದ ಸಮಯ, ಸ್ಥಳ ಮತ್ತು ವಿಧಾನಗಳು ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ನೇರ ಪ್ರಭಾವ ಬೀರುತ್ತವೆ ಎಂದು ತಜ್ಞರು ತಿಳಿಸುತ್ತಾರೆ. ಖಾಲಿ ಹೊಟ್ಟೆಯಲ್ಲಿ ಸ್ನಾನ ಮಾಡುವುದನ್ನು ಆದ್ಯತೆಯಾಗಿ ಮಾಡುವುದು ಉತ್ತಮ ಎನ್ನುತ್ತಾರೆ ತಜ್ಞರು.
- ತಣ್ಣೀರಿನ ಸ್ನಾನ: ತಣ್ಣೀರು ದೇಹವನ್ನು ಪ್ರಬುದ್ಧಗೊಳಿಸುತ್ತದೆ ಮತ್ತು ಮೆದುಳಿನಿಂದ ಕಾಲ್ಬೆರಳುಗಳವರೆಗೆ ಏಕಕಾಲದಲ್ಲಿ ಉತ್ಸಾಹ ಹುಟ್ಟಿಸುತ್ತದೆ. ಇದು ಶ್ವಾಸಕೋಶದ ಆರೋಗ್ಯವನ್ನು ಬೆಂಬಲಿಸುತ್ತದೆ, ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಹಾಗೂ ಒತ್ತಡವನ್ನು ಕಡಿಮೆ ಮಾಡುವ ಹಾರ್ಮೋನುಗಳನ್ನು ಸಕ್ರಿಯಗೊಳಿಸುತ್ತದೆ.
- ಸೂರ್ಯ ಸ್ನಾನ: ಬೆಳಗ್ಗೆ 9ರೊಳಗೆ ಅಥವಾ ಸಂಜೆ 4ರಿಂದ 6ರವರೆಗೆ ಸೂರ್ಯನ ಬೆಳಕಿಗೆ 20–30 ನಿಮಿಷ ದೇಹವನ್ನು ಒಡ್ಡಿಕೊಳ್ಳುವುದರಿಂದ ವಿಟಮಿನ್ ಡಿ ಸರಿಯಾಗಿ ಉತ್ಪತ್ತಿಯಾಗುತ್ತದೆ. ಜೊತೆಗೆ ಸಿರೋಟೋನಿನ್ ಮತ್ತು ಎಂಡಾರ್ಫಿನ್ ಹಾರ್ಮೋನುಗಳು ಬಿಡುಗಡೆ ಆಗಿ ಮಾನಸಿಕ ಆರೋಗ್ಯವನ್ನು ಉತ್ತೇಜಿಸುತ್ತವೆ.
- ಬಿಸಿನೀರು ಸ್ನಾನ: ಬಿಸಿನೀರು ನೈಸರ್ಗಿಕವಾಗಿ ಸ್ನಾಯುಗಳನ್ನು ಶಾಂತಗೊಳಿಸುತ್ತದೆ ಮತ್ತು ಮೈ ಸ್ನಾಯುಗಳಲ್ಲಿ ಆಯಾಸ ನಿವಾರಣೆ ಮಾಡುತ್ತವೆ. ಇದರಿಂದ ಕುತ್ತಿಗೆ, ಬೆನ್ನು ನೋವು, ಮುಂತಾದ ಸಮಸ್ಯೆಗಳಲ್ಲಿ ಸಹಾಯವಾಗುತ್ತದೆ.
- ಟಬ್ ಸ್ನಾನ: ಟಬ್ ಸ್ನಾನದಿಂದ ಬೆನ್ನುಮೂಳೆ ಅಥವಾ ಸೊಂಟದಿಂದ ರಕ್ತ ಸಂಚಾರ ಉತ್ತಮಗೊಳ್ಳುತ್ತದೆ. ಇದು ಮಲಬದ್ಧತೆ, ಅಜೀರ್ಣ, ಹೊಟ್ಟೆ ಉಬ್ಬರದಂತಹ ಸಮಸ್ಯೆಗಳಲ್ಲಿ ಸಹಾಯ ಮಾಡುತ್ತದೆ. ದಿನಕ್ಕೆ 20–25 ನಿಮಿಷಗಳ ಕಾಲ ಟಬ್ ಸ್ನಾನ ಮಾಡಿದರೆ ದೇಹ ಹಾಗೂ ಮನಸ್ಸು ಆರಾಮವನ್ನು ಪಡೆಯುತ್ತದೆ.
- ಅಭ್ಯಂಗ ಸ್ನಾನ: ಆಯುರ್ವೇದದಲ್ಲಿ ಅಭ್ಯಂಗ ಸ್ನಾನ ವಿಶೇಷ ಸ್ಥಾನ ಪಡೆದಿದೆ. ಎಳ್ಳೆಣ್ಣೆ, ತೆಂಗಿನ ಎಣ್ಣೆ, ಕ್ಯಾಸ್ಟರ್ ಆಯಿಲ್ ಮುಂತಾದ ಎಣ್ಣೆಗಳನ್ನು ನೆತ್ತಿಯಿಂದ ಪಾದಗಳವರೆಗೆ ಹಚ್ಚಿ 15–40 ನಿಮಿಷ ಬಿಟ್ಟು ನಂತರ ಸ್ನಾನ ಮಾಡಬೇಕು. ಈ ರೀತಿಯ ಸ್ನಾದ ಪ್ರಕ್ರಿಯೆ ನರಮಂಡಲವನ್ನು ಉತ್ತೇಜಿಸುತ್ತದೆ. ಇದು ಚರ್ಮ, ಮೂಳೆ, ಕೂದಲು, ಪಾದ ಹಾಗೂ ಕಣ್ಣುಗಳ ಆರೋಗ್ಯವನ್ನು ಬೆಂಬಲಿಸುತ್ತದೆ. ಅಜೀರ್ಣ, ಹೊಟ್ಟೆ ಉರಿಯೂತ ಅಥವಾ ಅಧಿಕ ಜ್ವರ ಇರುವವರು ಈ ಸ್ನಾನ ಮಾಡಬಾರದು.
ನಿತ್ಯ ಸ್ನಾನದ ಈ ಪ್ರಕಾರಗಳು ದೈಹಿಕ ಶಕ್ತಿ ಹೆಚ್ಚಿಸುವುದರ ಜೊತೆಗೆ ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತವೆ. ಸಮಯ, ನೀರಿನ ತಾಪಮಾನ ಮತ್ತು ವಿಧಾನಗಳನ್ನು ಸರಿಯಾಗಿ ಪಾಲಿಸುವುದರಿಂದ ದೇಹ ಮತ್ತು ಮನಸ್ಸಿಗೆ ಸಮಗ್ರ ಆರೋಗ್ಯ ಲಭಿಸುತ್ತದೆ ಎಂದು ತಜ್ಞರು ಸಲಹೆ ನೀಡುತ್ತಾರೆ.

