ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ರಾಜಕೀಯದಲ್ಲಿ ಚರ್ಚೆಯಾಗುತ್ತಿರುವ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಸ್ಥಾನ ಕುರಿತ ಕಿತ್ತಾಟದ ಕುರಿತು ನಟಿ ಹಾಗೂ ಕಾಂಗ್ರೆಸ್ ನಾಯಕಿ ರಮ್ಯಾ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಖಾಸಗಿ ಆಸ್ಪತ್ರೆಯೊಂದು ಉದ್ಘಾಟನೆ ಕಾರ್ಯಕ್ರಮದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ರಮ್ಯಾ, ಮುಖ್ಯಮಂತ್ರಿ ಯಾರು ಎನ್ನುವುದನ್ನು ತಾವೇ ನಿರ್ಧರಿಸುವ ವಿಷಯವಲ್ಲ, ಅದು ಪಕ್ಷದ ಹೈಕಮಾಂಡ್ ಕೈಯಲ್ಲಿರುವ ತೀರ್ಮಾನ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
“ಮುಖ್ಯಮಂತ್ರಿ ಕುರಿತು ಅಂತಿಮ ನಿರ್ಧಾರವನ್ನು ಪಕ್ಷದ ಹಿರಿಯ ನಾಯಕರು ತೆಗೆದುಕೊಳ್ಳುತ್ತಾರೆ. ಈ ವಿಚಾರದಲ್ಲಿ ಎಲ್ಲರಿಗೂ ತಮ್ಮ ತಮ್ಮ ಅಭಿಪ್ರಾಯ ಇರುತ್ತದೆ. ಆದರೆ ಪಕ್ಷದ ಒಟ್ಟಾರೆ ಹಿತವನ್ನು ಗಮನದಲ್ಲಿಟ್ಟುಕೊಂಡೇ ನಿರ್ಧಾರವಾಗುತ್ತದೆ” ಎಂದು ಅವರು ಹೇಳಿದರು.
ಯಾರನ್ನು ಮುಖ್ಯಮಂತ್ರಿ ಮಾಡಿದರೂ ತಮಗೆ ಯಾವುದೇ ಅಸಮಾಧಾನ ಇಲ್ಲ, ರಾಜ್ಯಕ್ಕೆ ಒಳ್ಳೆಯದಾಗುವಂತಹ ತೀರ್ಮಾನವಾಗಬೇಕು ಎಂಬುದೇ ತಮ್ಮ ಆಶಯ ಎಂದು ರಮ್ಯಾ ಸ್ಪಷ್ಟಪಡಿಸಿದರು.
ಪಕ್ಷದೊಳಗಿನ ಗೊಂದಲಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ರಾಜಕೀಯ ಎಂದರೆ ಹಾಗೇ, ಎಲ್ಲರಿಗೂ ಅರ್ಹತೆ ಇದೆ, ಯಾರನ್ನು ಮಾಡಿದರೂ ಒಳ್ಳೆಯದೇ” ಎಂದು ನಗುತ್ತಲೇ ಪ್ರತಿಕ್ರಿಯಿಸಿದರು.

