Wednesday, November 5, 2025

ಏಷ್ಯಾಕಪ್ ಗಾಗಿ ಬಿಸಿಸಿಐ ಪಟ್ಟು: ಐಸಿಸಿ ಸಭೆಗೆ ಮೊಹ್ಸಿನ್ ನಖ್ವಿ ಗೈರು?

ಹೊಸದಿಗಂತ ಡಿಜಿಟಲ್ ಡೆಸ್ಕ್

ಭಾರತ ಏಷ್ಯಾಕಪ್ ಗೆದ್ದು ಒಂದು ತಿಂಗಳಿಗೂ ಹೆಚ್ಚು ಸಮಯ ಕಳೆದಿದೆ. ಆದ್ರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮತ್ತು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಮೊಹ್ಸಿನ್ ನಖ್ವಿಇನ್ನೂ ಕೂಡ ಭಾರತಕ್ಕೆ ಟೂರ್ನಮೆಂಟ್ ಟ್ರೋಫಿಯನ್ನು ನೀಡಿಲ್ಲ.

ಈಗಾಗ್ಲೇ ಬಿಸಿಸಿಐ (BCCI) ಎಸಿಸಿಗೆ ಪತ್ರ ಬರೆದು ಟ್ರೋಫಿಯನ್ನು ಮುಂಬೈಗೆ ಕಳುಹಿಸುವಂತೆ ವಿನಂತಿಸಿತ್ತು. ಆದರೆ ನಖ್ವಿ ಮಾತ್ರ ತಮ್ಮ ಮೊಂಡುತನವನ್ನು ಬಿಟ್ಟಿಲ್ಲ.

ಇತ್ತ ನಖ್ವಿಯ ನಾಟಕದಿಂದ ಕೋಪಗೊಂಡಿರುವ ಬಿಸಿಸಿಐ ದುಬೈನಲ್ಲಿ ನಡೆಯಲಿರುವ ನಾಲ್ಕು ದಿನಗಳ ಐಸಿಸಿ ಕಾರ್ಯನಿರ್ವಾಹಕ ಮಂಡಳಿ ಸಭೆಯಲ್ಲಿ ಐಸಿಸಿಗೆ ದೂರು ನೀಡಲು ಮುಂದಾಗಿದೆ. ಆದರೆ ಟ್ರೋಫಿ ಕೊಡದೆ ಸತಾಯಿಸುತ್ತಿರುವ ನಖ್ವಿ ಈ ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಲಾಗುತ್ತಿದೆ.

ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಮೊಹ್ಸಿನ್ ನಖ್ವಿ ದುಬೈನಲ್ಲಿ ನಡೆಯಲಿರುವ ನಾಲ್ಕು ದಿನಗಳ ಐಸಿಸಿ ಕಾರ್ಯನಿರ್ವಾಹಕ ಮಂಡಳಿ ಸಭೆಯಲ್ಲಿ ಭಾಗವಹಿಸುತ್ತಿಲ್ಲ ಎಂದು ವರದಿಯಾಗಿದೆ. ದೇಶೀಯ ರಾಜಕೀಯ ಸಮಸ್ಯೆಗಳ ಕಾರಣದಿಂದಾಗಿ ನಖ್ವಿ ಈ ಸಭೆಗೆ ಗೈರಾಗಲಿದ್ದಾರೆ ಎಂದು ವರದಿಯಾಗಿದೆ.

ಪಿಸಿಬಿ ಮೂಲವೊಂದು ತಿಳಿಸಿರುವ ಪ್ರಕಾರ, ಮಂಡಳಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಸುಮೈರ್ ಸೈಯದ್ ಅವರು ನಖ್ವಿ ಬದಲಿಗೆ ಸಿಇಒಗಳ ಸಭೆಯಲ್ಲಿ ಭಾಗವಹಿಸಲಿದ್ದಾರೆ. ನಖ್ವಿ ದುಬೈಗೆ ಪ್ರಯಾಣಿಸಲು ಸಾಧ್ಯವಾಗದಿದ್ದರೆ, ಸೈಯದ್ ನವೆಂಬರ್ 7 ರಂದು ನಡೆಯಲಿರುವ ನಿರ್ಣಾಯಕ ಮಂಡಳಿ ಸಭೆಯಲ್ಲಿ ಪಾಕಿಸ್ತಾನವನ್ನು ಪ್ರತಿನಿಧಿಸಬಹುದು. ಆದಾಗ್ಯೂ, ನಖ್ವಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಭೆಗೆ ಹಾಜರಾಗುವ ಸಾಧ್ಯತೆಯೂ ಇದೆ.

ಮೊಹ್ಸಿನ್ ನಖ್ವಿಯ ಈ ನಡೆಯಿಂದ ತಾಳ್ಮೆ ಕಳೆದುಕೊಂಡಿರುವ ಬಿಸಿಸಿಐ, ಈ ಬಗ್ಗೆ ಐಸಿಸಿಗೆ ದೂರು ನೀಡುವುದಾಗಿ ಹೇಳಿಕೊಂಡಿದೆ. ಈ ವಿಷಯದ ಕುರಿತು ಮಾತನಾಡಿದ ದೇವಜಿತ್ ಸೈಕಿಯಾ, ‘ಹತ್ತು ದಿನಗಳ ಹಿಂದೆ, ನಾವು ಎಸಿಸಿ ಅಧ್ಯಕ್ಷರಿಗೆ ಸಾಧ್ಯವಾದಷ್ಟು ಬೇಗ ಬಿಸಿಸಿಐಗೆ ಟ್ರೋಫಿಯನ್ನು ಹಸ್ತಾಂತರಿಸುವಂತೆ ವಿನಂತಿಸಿ ಪತ್ರ ಬರೆದಿದ್ದೆವು. ಆದರೆ, ಇಲ್ಲಿಯವರೆಗೆ ನಮಗೆ ಟ್ರೋಫಿ ಸಿಕ್ಕಿಲ್ಲ. ನಾವು ಇನ್ನೂ ಒಂದು ದಿನ ಕಾಯುತ್ತಿದ್ದೇವೆ. ನವೆಂಬರ್ 3 ರೊಳಗೆ ನಮಗೆ ಟ್ರೋಫಿ ಸಿಗದಿದ್ದರೆ, ನವೆಂಬರ್ 4 ರಂದು ದುಬೈನಲ್ಲಿರುವ ಐಸಿಸಿ ಪ್ರಧಾನ ಕಚೇರಿಯಲ್ಲಿ ನಡೆಯಲಿರುವ ಸಭೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಅತ್ಯುನ್ನತ ಸಂಸ್ಥೆಗೆ ನಮ್ಮ ದೂರು ಸಲ್ಲಿಸುತ್ತೇವೆ. ಐಸಿಸಿ ನ್ಯಾಯ ಒದಗಿಸುತ್ತದೆ ಮತ್ತು ಭಾರತಕ್ಕೆ ಸಾಧ್ಯವಾದಷ್ಟು ಬೇಗ ಟ್ರೋಫಿ ಪಡೆಯಲು ಸಹಾಯ ಮಾಡುತ್ತದೆ ಎಂದು ನನಗೆ ವಿಶ್ವಾಸವಿದೆ’ ಎಂದಿದ್ದಾರೆ.

error: Content is protected !!