January15, 2026
Thursday, January 15, 2026
spot_img

ದೇಶಿಯ ಟೂರ್ನಿಗಳಲ್ಲಿ ಸ್ಟಾರ್ ಆಟಗಾರರ ಹಾಜರಿ ಕಡ್ಡಾಯ: ಬಿಸಿಸಿಐನಿಂದ ಖಡಕ್ ಆದೇಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶೀಯ ಕ್ರಿಕೆಟ್‌ಗೆ ಹೊಸ ಜೀವ ತುಂಬುವ ಉದ್ದೇಶದಿಂದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ. ಡಿಸೆಂಬರ್ 24ರಿಂದ ಆರಂಭವಾಗುವ ವಿಜಯ್ ಹಜಾರೆ ಟ್ರೋಫಿಯಲ್ಲಿ ರಾಷ್ಟ್ರೀಯ ತಂಡದ ಪ್ರಮುಖ ಆಟಗಾರರು ಕಡ್ಡಾಯವಾಗಿ ಪಾಲ್ಗೊಳ್ಳಬೇಕು ಎಂದು ಬಿಸಿಸಿಐ ಸೂಚನೆ ನೀಡಿದೆ. ಅಂತಾರಾಷ್ಟ್ರೀಯ ಪಂದ್ಯಗಳ ನಡುವಿನ ವಿರಾಮದ ಅವಧಿಯಲ್ಲಿ ದೇಶಿ ಕ್ರಿಕೆಟ್‌ಗೆ ಹೆಚ್ಚು ಒತ್ತು ನೀಡಬೇಕೆಂಬ ನಿಟ್ಟಿನಲ್ಲಿ ಈ ಕ್ರಮ ಜಾರಿಯಾಗಿದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿ ಮುಕ್ತಾಯವಾಗುವ ಡಿಸೆಂಬರ್ 19ರಿಂದ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿ ಆರಂಭವಾಗುವ ಜನವರಿ 11, 2026ರ ನಡುವೆ ಸಾಕಷ್ಟು ಸಮಯ ಇರುವುದರಿಂದ, ಈ ಅವಧಿಯನ್ನು ದೇಶೀಯ ಕ್ರಿಕೆಟ್‌ಗೆ ಆಟಗಾರರನ್ನು ಬಳಸಿಕೊಳ್ಳಲು ಮಂಡಳಿ ತೀರ್ಮಾನಿಸಿದೆ. ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ನೇತೃತ್ವದಲ್ಲಿ ಈ ನಿಯಮ ಜಾರಿಗೆ ಬಂದಿದೆ. ಇದರಂತೆ, ಎಲ್ಲಾ ಸಕ್ರಿಯ ರಾಷ್ಟ್ರೀಯ ಆಟಗಾರರು ಕನಿಷ್ಠ ಎರಡು ಏಕದಿನ ಪಂದ್ಯಗಳಲ್ಲಿ ತಮ್ಮ ರಾಜ್ಯ ತಂಡಗಳನ್ನು ಪ್ರತಿನಿಧಿಸಬೇಕು.

ಈ ತೀರ್ಮಾನದ ಪರಿಣಾಮವಾಗಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಹಲವು ವರ್ಷಗಳ ಬಳಿಕ ದೇಶಿ ಅಂಗಳದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರೊಂದಿಗೆ ಶುಭ್‌ಮನ್ ಗಿಲ್, ಜಸ್ಪ್ರೀತ್ ಬುಮ್ರಾ, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ ಹಾಗೂ ಸೂರ್ಯಕುಮಾರ್ ಯಾದವ್ ಕೂಡ ರಾಜ್ಯ ತಂಡಗಳ ಪರ ಆಡಲಿದ್ದಾರೆ. ಇನ್ನು ಆಸ್ಟ್ರೇಲಿಯಾ ಪ್ರವಾಸದ ವೇಳೆ ಗಾಯಗೊಂಡಿದ್ದ ಶ್ರೇಯಸ್ ಅಯ್ಯರ್‌ಗೆ ಮಾತ್ರ ವೈದ್ಯಕೀಯ ಕಾರಣದಿಂದ ವಿನಾಯಿತಿ ನೀಡಲಾಗಿದೆ.

Most Read

error: Content is protected !!