ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಬಳಲುವ ರೋಗಿಗಳು ಸಾಮಾನ್ಯವಾಗಿ ವೈದ್ಯರ ಮುಂದೆ ಇಡೋದು ಎರಡು ಪ್ರಶ್ನೆಗಳು, ಒಂದು ಕಿಡ್ನಿ ಸ್ಟೋನ್ ಉಂಟಾಗಲು ಕಾರಣವೇನು? ಎರಡನೇಯದು ಕಿಡ್ನಿ ಸ್ಟೋನ್ ಮರುಕಳಿಸಬಹುದೇ?
ಕಿಡ್ನಿ ಸ್ಟೋನ್‌ನಿಂದ ಬಳಲುವವರು ಮಾತ್ರ ಅಲ್ಲ, ಕಿಡ್ನಿ ಸ್ಟೋನ್ ಬರಬಾರದು, ಆರೋಗ್ಯವಾಗಿ ಇರಬೇಕು ಎಂದುಕೊಂಡ ಯಾರೇ ಆದರೂ ಮಾಹಿತಿ ತಿಳಿದುಕೊಳ್ಳಬಹುದು. ಮಂಗಳೂರಿನ ಕೆ.ಎಂ.ಸಿ. ಆಸ್ಪತ್ರೆಯ ಕನ್ಸಲ್ಟೆಂಟ್ ಯುರೋಲಜಿಸ್ಟ್ ಡಾ. ಪ್ರಜ್ವಲ್ ರವೀಂದ್ರ ಈ ಬಗ್ಗೆ ಕಂಪ್ಲೀಟ್ ಡೀಟೇಲ್ಸ್ ನೀಡಿದ್ದಾರೆ ನೋಡಿ..
ಬೇಸಿಗೆಯಲ್ಲಿ ಸಮಸ್ಯೆ ಜಾಸ್ತಿ

ಯಾವುದೇ ದ್ರವ ಪದಾರ್ಥ ಒಂದೇ ಕಡೆ ಶೇಖರಣೆಗೊಂಡಾಗ ಸಕ್ಕರೆ ಪಾಕದಲ್ಲಿ ಕಂಡುಬರುವಂತಹ ಹರಳು ಅಥವಾ ಉಪ್ಪಿನಂತಹ ಹರಳು ನಿರ್ಮಾಣವಾಗುತ್ತದೆ, ಇದೇ ಕಿಡ್ನಿ ಸ್ಟೋನ್ ಆಗಿ ಸಮಸ್ಯೆಗೆ ಕಾರಣವಾಗುತ್ತದೆ. ಇನ್ನು ಒಮ್ಮೆ ಕಿಡ್ನಿ ಸ್ಟೋನ್ ಸಮಸ್ಯೆಗೆ ಗುರಿಯಾದಲ್ಲಿ ಅಂತವರು ಜೀವನಪರ್ಯಂತ ಸ್ಟೋನ್ ಸಮಸ್ಯೆ ಮರುಪಡೆಯುವ ಅಪಾಯವನ್ನು ಹೊಂದಿರುತ್ತಾರೆ. ಬೇಸಿಗೆ ಸಮಯವು ಕಿಡ್ನಿ ಸ್ಟೋನ್ ಸಮಸ್ಯೆ ಹೊಂದಿರುವವರಿಗೆ ಅತ್ಯಂತ ಸೂಕ್ಷ್ಮ ಸಮಯವಾಗಿದೆ. ಅದರಲ್ಲೂ ಅತಿಯಾದ ತಾಪಮಾನ ಹೊಂದಿರುವ ಪ್ರದೇಶಗಳಲ್ಲಿ ನಿರ್ಜಲೀಕರಣ (ಡಿಹೈಡ್ರೇಶನ್) ಸಮಸ್ಯೆ ಹೆಚ್ಚಾಗಿ ತಲೆದೂರುತ್ತದೆ, ಇದರಿಂದ ಸ್ಟೋನ್ ಸಮಸ್ಯೆಯೂ ಹೆಚ್ಚಾಗುತ್ತದೆ. ಇದಕ್ಕೆ ಪರಿಹಾರ ಸೂಕ್ತ ಪ್ರಮಾಣದಲ್ಲಿ ನೀರಿನ ಸೇವನೆ.
ಎಷ್ಟು ಪ್ರಮಾಣದಲ್ಲಿ ನೀರಿನ ಸೇವನೆ ಅಗತ್ಯ?
ಮೂತ್ರ ಒಂದೇ ಕಡೆ ಶೇಖರಣೆಗೊಳ್ಳದಂತೆ ತಡೆಯಲು ನಿತ್ಯ 2.5 ಲೀಟರ್ ನಿಂದ 3 ಲೀಟರ್‍ವರೆಗೆ ನೀರು ಸೇವಿಸಿ. ನಿಮ್ಮ ವ್ಯಾಯಾಮ, ವರ್ಕ್‌ಔಟ್, ಉದ್ಯೋಗದ ವಾತಾವರಣ , ತಾಪಮಾನದ ಮೇಲೆ ನೀರಿನ ಸೇವನೆಯ ಪ್ರಮಾಣವನ್ನು ಹೆಚ್ಚಿಸಬೇಕಾಗುತ್ತದೆ. ಒಂದು ನೆನಪಿಡಬೇಕಾದ ನಿಯಮವೆಂದರೆ ಮೂತ್ರದ ಪ್ರಮಾಣ ನಿತ್ಯ 2 ಲೀಟರ್ ನಷ್ಟಿರಲಿ. ಹಾಗೇ ಮೂತ್ರದ ಬಣ್ಣ ಕ್ಲಿಯರ್ ಆಗಿರಬೇಕು. ಗಾಢ ಬಣ್ಣದ ಮೂತ್ರ ಡಿಹೈಡ್ರೇಶನ್‌ನ್ನು ಸೂಚಿಸುತ್ತದೆ.

ಹೈಡ್ರೇಶನ್ ಬೆಂಬಲಿಸುವ ಪಾನೀಯಗಳಾವವು?
ನೀರು, ಎಳನೀರು, ಮಜ್ಜಿಗೆ ಹಾಗೂ ನಿಂಬು ಪಾನಕ ಡಿಹೈಡ್ರೇಶನ್ ತಡೆಯಲು ಉತ್ತಮ ಆಯ್ಕೆ. ಕಾರ್ಬೋನೇಟಡ್ ಪಾನೀಯಗಳು ಎಲ್ಲಾ ವಯಸ್ಸಿನವರೂ ದೂರವಿಡಬೇಕಾದ ಪಾನಿಯ. ಹಾಗೇ ಆಲ್ಕೊಹಾಲ್ ಡ್ರಿಂಕ್ಸ್‌ಗಳು ಆರೋಗ್ಯದ ಮೇಲೆ ಬಹು ವಿಧದಲ್ಲಿ ಹಾನಿ ಉಂಟುಮಾಡುತ್ತದೆ. ಬಿಯರ್ ಸೇವನೆ ಹೈಡ್ರೆಟ್ ಆಗಿರಲು ಸಹಾಯ ಮಾಡುವುದಿಲ್ಲ. ಸಾಕಷ್ಟು ಹೆಲ್ತ್ ಡ್ರಿಂಕ್ಸ್‌ಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆ ಅಂಶವನ್ನು ಹೊಂದಿರುವುದಿಂದ ಅವುಗಳನ್ನು ಸೂಪರ್ ಮಾರ್ಕೆಟ್‌ನಲ್ಲಿಯೇ ಬಿಡುವುದು ಒಳ್ಳೆಯದು.

ಸಮತೋಲಿತ ಆಹಾರ ಅಭ್ಯಾಸ
ರೋಗಿಗಳು ವಿಸ್ತಾರವಾದ ಡಯಟ್ ಯೋಜನೆಯನ್ನು ಇಷ್ಟಪಡುತ್ತಾರೆ, ಆದರೆ ನಾವು ಸಮತೋಲಿತ ಆಹಾರದ ಸಲಹೆಯನ್ನು ನೀಡುತ್ತೇವೆ. ಕಿಡ್ನಿ ಆರೋಗ್ಯಕ್ಕೆ ಉಪ್ಪು ಮಿಶ್ರಿತ ಸ್ನ್ಯಾಕ್‌ಗಳು , ಸಂಸ್ಕರಿಸಿದ ಆಹಾರ ಪದಾರ್ಥ, ಕಾರ್ಬೋನೇಟೆಡ್ ಪಾನೀಯಗಳು ಹಾನಿಕಾರಕ. ಪ್ರಾಣಿಜನ್ಯ ಪ್ರೊಟೀನ್‌ಗಳಾದ ರೆಡ್ ಮೀಟ್ ಸೇವನೆ ಕಡಿಮೆ ಮಾಡುವುದು ಉತ್ತಮ. ಹೆಚ್ಚಿನ ಪ್ರಮಾಣ ಫೈಬರ್, ಪ್ರೊಟೀನ್‌ಯುಕ್ತ ಸಮತೋಲಿತ ಆಹಾರ ಸೇವನೆ ಅಗತ್ಯ. ಹಾಗೇ ಸೂಕ್ತ ಪ್ರಮಾಣದ ಡಯಟರಿ ಕ್ಯಾಲ್ಶಿಯಮ್ ಸ್ಟೋನ್ ರಚನೆಯ ಅಪಾಯವನ್ನು ತಗ್ಗಿಸುತ್ತದೆ. ಕ್ಯಾಲ್ಶಿಯಮ್ ನಮ್ಮ ಆಹಾರ ವ್ಯವಸ್ಥೆಯಲ್ಲಿ ಪ್ರಮುಖ ಅಂಶವಾಗಿದೆ.

ವಯಸ್ಸು, ಆರೋಗ್ಯ ಸ್ಥಿತಿಗೆ ಅನುಗುಣವಾಗಿ ನಿಯಮಿತ ವ್ಯಾಯಾಮಗಳು ಸಮಗ್ರ ಕಿಡ್ನಿ ಆರೋಗ್ಯ ಮತ್ತು ಹೃದಯ ಆರೋಗ್ಯವನ್ನು ಕಾಪಾಡುವಲ್ಲಿ ನೆರವಾಗುತ್ತದೆ. ನೆನಪಿರಲಿ ಈ ಮೇಲಿನ ಸಲಹೆಗಳು ಆರೋಗ್ಯವಂತ ವ್ಯಕ್ತಿಗಳಿಗೆ ಮಾತ್ರ . ಮೂತ್ರಪಿಂಡದ ಸಮಸ್ಯೆ ಅಥವಾ ಕಾರ್ಡಿಯಾಕ್ ಸಮಸ್ಯೆ ಹೊಂದಿರುವವರಿಗೆ ಅವರ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ವಿಶೇಷವಾದ ಡಯಟರಿ ಮತ್ತು ಫ್ಲುಯೆಡ್ ಸಲಹೆಗಳನ್ನು ನೀಡಲಾಗುತ್ತದೆ. ಅಧಿಕ ಫ್ಲುಯಿಡ್ ಸೇವನೆ ಇಂತಹ ಸಮಸ್ಯೆ ಹೊಂದಿರುವವರಲ್ಲಿ ಫ್ಲುಯಿಡ್ ಓವರ್‍ಲೋಡ್‌ಗೆ ಕಾರಣವಾಗುತ್ತದೆ.
ನೀವೇ ಡಾಕ್ಟರ್ ಆಗಬೇಡಿ, ವೈದ್ಯರನ್ನು ಭೇಟಿ ಮಾಡಿ
ಕಿಡ್ನಿ ಸ್ಟೋನ್ ಸಮಸ್ಯೆ ಹೊಂದಿರುವವರು ತಡಮಾಡದೇ ಯೂರಾಲಾಜಿ ತಜ್ಞರ ಸಲಹೆ ಪಡೆಯಬೇಕು. ಪ್ರತಿಯೊಬ್ಬ ರೋಗಿಯೂ ಶಸ್ತ್ರಚಿಕಿತ್ಸೆಯನ್ನು ತಪ್ಪಿಸಲು ಪ್ರಯತ್ನಿಸುತ್ತಾರೆ ಆದರೆ ಚಿಕಿತ್ಸೆ ಪಡೆಯುವಲ್ಲಿ ವಿಳಂಬ ಮಾಡಿದರೆ , ಫ್ಲಶ್ ಥೆರಪಿಯನ್ನು ಸರಿಯಾಗಿ ನಿರ್ವಹಿಸದೇ ಇದ್ದಲ್ಲಿ, ಸ್ವಯಂ ಚಿಕಿತ್ಸೆ, ಅತಿಯಾದ ನೋವು ನಿವಾರಕ ಮಾತ್ರಗಳ ಬಳಕೆ ಮಾಡಿದ್ದಲ್ಲಿ ಕಿಡ್ನಿ ಆರೋಗ್ಯವನ್ನು ಮತ್ತಷ್ಟು ಹದಗೆಡಿಸಬಹುದು.
ಸೂಕ್ತ ಪ್ರಮಾಣದ ನೀರು, ನೀರಿನಾಂಶ ಸೇವನೆಯ ಮೂಲಕ ಕಿಡ್ನಿ ಸ್ಟೋನ್‌ನಿಂದ ದೂರವಿರಿ.



