ಹೊಸದಿಗಂತ ಕಲಬುರಗಿ:
ರಾಮನವಮಿ ಹಬ್ಬದ ಅಂಗವಾಗಿ ಕಲಬುರಗಿಯಲ್ಲಿ ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮನ 15 ಅಡಿ ಎತ್ತರದ ಭವ್ಯ ಮೂರ್ತಿಯೊಂದಿಗೆ ಅದ್ಧೂರಿ ಹಾಗೂ ವೈಭವಮಯ ಶೋಭಾಯಾತ್ರೆ ಜರುಗಿತು.
ನಗರದಾದ್ಯಂತ ಭಕ್ತಿ, ಸಂಭ್ರಮ ಮತ್ತು ಕೇಸರಿ ವಾತಾವರಣ ಕಣ್ಣಿಗೆ ಹಬ್ಬವಾಗಿತ್ತು. ನಗರದ ಚೆಕ್ಪೋಸ್ಟ್ ಬಳಿ ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿ ಚಿ. ದೊಡ್ಡಪ್ಪ ಅಪ್ಪ ಸೇರಿದಂತೆ ಜಿಲ್ಲೆಯ ವಿವಿಧ ಮಠಾಧೀಶರು ಶೋಭಾಯಾತ್ರೆಗೆ ಘನ ಚಾಲನೆ ನೀಡಿದರು. ಈ ವೇಳೆ ಸಾವಿರಾರು ಭಕ್ತರು ಜಯ ಶ್ರೀರಾಮ ಘೋಷಣೆಗಳನ್ನು ಕೂಗುತ್ತಾ ಉತ್ಸಾಹದಿಂದ ಭಾಗವಹಿಸಿದರು.
ಶೋಭಾಯಾತ್ರೆಯ ಮಾರ್ಗದುದ್ದಕ್ಕೂ ರಾಮಭಕ್ತರಿಗೆ ಅನ್ನ ಸಂತರ್ಪಣೆ ಹಾಗೂ ತಂಪು ಪಾನೀಯಗಳ ವ್ಯವಸ್ಥೆ ಮಾಡಲಾಗಿತ್ತು. ಹಲವೆಡೆ ಸೇವಾ ಮನೋಭಾವದ ಸಂಘಟನೆಗಳು ಭಕ್ತರಿಗೆ ನೆರವಾಗುವ ಕಾರ್ಯದಲ್ಲಿ ತೊಡಗಿಕೊಂಡಿದ್ದವು.
ರಾಮನವಮಿ ಅಂಗವಾಗಿ ಸಂಪೂರ್ಣ ಕೇಸರಿ ಮಯವಾಗಿದ್ದ ಕಲಬುರಗಿ ನಗರದಲ್ಲಿ ಸುಮಾರು 2 ಲಕ್ಷಕ್ಕೂ ಅಧಿಕ ರಾಮಭಕ್ತರು ಶೋಭಾಯಾತ್ರೆಯಲ್ಲಿ ಭಾಗಿಯಾಗಿ ಭಕ್ತಿ ಪರವಶತೆಯನ್ನು ಮೆರೆದರು. ಈ ವೈಭವಮಯ ಆಚರಣೆ ನಗರದ ಸಾಂಸ್ಕೃತಿಕ ಹಾಗೂ ಧಾರ್ಮಿಕ ಐಕ್ಯತೆಯನ್ನು ಮತ್ತೊಮ್ಮೆ ಹೊರಹಾಕಿತು.



