ಹೊಸದಿಗಂತ ಬೆಳಗಾವಿ:
ಜಿಲ್ಲೆಯ ಆರ್ಥಿಕ ಶಕ್ತಿಯಾಗಿರುವ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ (DCC) ಬ್ಯಾಂಕ್ 2025-26ನೇ ಹಣಕಾಸು ವರ್ಷದಲ್ಲಿ ಅಭೂತಪೂರ್ವ ಪ್ರಗತಿ ಸಾಧಿಸಿದೆ. ಬ್ಯಾಂಕ್ ಈ ಬಾರಿ ಬರೋಬ್ಬರಿ 56.25 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸುವ ಮೂಲಕ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದೆ ಎಂದು ಬ್ಯಾಂಕಿನ ನಿರ್ದೇಶಕ ಅಣ್ಣಾಸಾಹೇಬ್ ಜೊಲ್ಲೆ ತಿಳಿಸಿದ್ದಾರೆ.
ಗುರುವಾರ ನಗರದ ಬ್ಯಾಂಕ್ ಆವರಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರೊಂದಿಗೆ ಮಾಹಿತಿ ಹಂಚಿಕೊಂಡ ಅವರು, ಬ್ಯಾಂಕಿನ ಯಶಸ್ಸಿನ ಪಯಣವನ್ನು ವಿವರಿಸಿದರು.
ಬ್ಯಾಂಕಿನ ಒಟ್ಟು ಠೇವಣಿ ಸಂಗ್ರಹವು ಈ ಬಾರಿ 6703.36 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಕಳೆದ ವರ್ಷಕ್ಕಿಂತ 616.30 ಕೋಟಿ ರೂಪಾಯಿ ಅಧಿಕ ಠೇವಣಿ ಹರಿದು ಬಂದಿರುವುದು ಬ್ಯಾಂಕಿನ ಮೇಲಿರುವ ಸಾರ್ವಜನಿಕರ ವಿಶ್ವಾಸಕ್ಕೆ ಸಾಕ್ಷಿಯಾಗಿದೆ. ರೈತರ ಹಿತರಕ್ಷಣೆಯನ್ನೇ ಗುರಿಯಾಗಿಸಿಕೊಂಡಿರುವ ಬ್ಯಾಂಕ್, ಜಿಲ್ಲೆಯ 4.77 ಲಕ್ಷ ರೈತರಿಗೆ ಒಟ್ಟು 3818.79 ಕೋಟಿ ರೂಪಾಯಿ ಬೆಳೆ ಸಾಲವನ್ನು ಶೂನ್ಯ ಬಡ್ಡಿ ದರದಲ್ಲಿ ವಿತರಿಸಿ ದಾಖಲೆ ಬರೆದಿದೆ.
ಬ್ಯಾಂಕನ್ನು ಆಧುನೀಕರಣದತ್ತ ಕೊಂಡೊಯ್ಯುತ್ತಿರುವ ಆಡಳಿತ ಮಂಡಳಿ, ಈಗಾಗಲೇ 112 ಶಾಖೆಗಳಲ್ಲಿ ‘ಕೋರ್ ಬ್ಯಾಂಕಿಂಗ್’ ವ್ಯವಸ್ಥೆ ಜಾರಿಗೊಳಿಸಿದೆ. ಶೀಘ್ರದಲ್ಲೇ ಗ್ರಾಹಕರಿಗೆ UPI ಸೇವೆ ಹಾಗೂ ಎಟಿಎಂ ಮೂಲಕ ಹಣ ಜಮಾ ಮಾಡುವ (CDM) ಸೌಲಭ್ಯ ದೊರೆಯಲಿದೆ ಎಂದು ಜೊಲ್ಲೆ ವಿವರಿಸಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಮಾತನಾಡಿ, “ರಾಜ್ಯದಲ್ಲೇ ಮೊದಲ ಬಾರಿಗೆ ಸಹಕಾರಿ ಸಂಘಗಳ ಸಿಬ್ಬಂದಿಗೆ ಆರೋಗ್ಯ ಮತ್ತು ಜೀವ ವಿಮೆ ಸೌಲಭ್ಯ ನೀಡಲಾಗಿದೆ. ಸ್ವಸಹಾಯ ಗುಂಪುಗಳಿಗೆ ₹36.18 ಕೋಟಿ ಸಾಲ ನೀಡಲಾಗಿದ್ದು, ₹5 ಲಕ್ಷದವರೆಗೆ ಶೂನ್ಯ ಬಡ್ಡಿ ದರ ನಿಗದಿಪಡಿಸಲಾಗಿದೆ. ಯಶಸ್ವಿನಿ ಯೋಜನೆಯಡಿ 3.64 ಲಕ್ಷ ಸದಸ್ಯರಿಗೆ ಆರೋಗ್ಯ ಭದ್ರತೆ ಕಲ್ಪಿಸಲಾಗಿದೆ,” ಎಂದರು. ಬ್ಯಾಂಕಿನ ಅವಧಿ ಮುಗಿಯುವಷ್ಟರಲ್ಲಿ ಇದನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಸಂಕಲ್ಪವನ್ನು ಅವರು ವ್ಯಕ್ತಪಡಿಸಿದರು.



