March 7, 2026
Saturday, March 7, 2026
spot_img

ಬೆಳಗಾವಿ ಪೊಲೀಸರ ಭರ್ಜರಿ ಬೇಟೆ: ಬೈಕ್ ಏರಿ ಬಂದು ಕಾರು ಎಗರಿಸುತ್ತಿದ್ದ ಖದೀಮರು ಈಗ ಜೈಲುಪಾಲು

ಹೊಸದಿಗಂತ ಬೆಳಗಾವಿ:

ಅಂತರರಾಜ್ಯ ಹಾಗೂ ಜಿಲ್ಲೆಗಳಾದ್ಯಂತ ವಾಹನಗಳನ್ನು ಕಳ್ಳತನ ಮಾಡಿ ನಡುರಾತ್ರಿ ಅಕ್ಷರಶಃ ಅಟ್ಟಹಾಸ ಮೆರೆಯುತ್ತಿದ್ದ ಕುಖ್ಯಾತ ಗ್ಯಾಂಗ್‌ಗೆ ಬೆಳಗಾವಿ ಪೊಲೀಸರು ಬ್ರೇಕ್ ಹಾಕಿದ್ದಾರೆ.

ಅಚ್ಚರಿಯ ಕಾರ್ಯಾಚರಣೆ ನಡೆಸಿದ ಮಾರಿಹಾಳ ಠಾಣೆಯ ಪೊಲೀಸರು, ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಸುಮಾರು 95.50 ಲಕ್ಷ ರೂಪಾಯಿ ಮೌಲ್ಯದ 21 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಗಳು ಶಿವಮೊಗ್ಗದ ಭದ್ರಾವತಿ ಹಾಗೂ ಮಹಾರಾಷ್ಟ್ರದ ಸಾಂಗ್ಲಿ ಮೂಲದವರಾಗಿದ್ದಾರೆ. ಇವರ ಕಳ್ಳತನದ ಹಾದಿಯೇ ವಿಭಿನ್ನವಾಗಿತ್ತು. ಇವರು ಮೊದಲು ವಿವಿಧ ನಗರಗಳಿಗೆ ತೆರಳಿ ದ್ವಿಚಕ್ರ ವಾಹನಗಳನ್ನು ಕದಿಯುತ್ತಿದ್ದರು. ಬಳಿಕ ಅದೇ ಕದ್ದ ಬೈಕ್‌ಗಳ ಮೇಲೆ ಸವಾರಿ ಮಾಡಿ, ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸಿದ್ದ ಬೆಲೆಬಾಳುವ ನಾಲ್ಕು ಚಕ್ರದ ವಾಹನಗಳನ್ನು ಎಗರಿಸುತ್ತಿದ್ದರು. ಕದ್ದ ವಾಹನಗಳನ್ನು ಅನ್ಯ ರಾಜ್ಯಗಳಲ್ಲಿ ಮಾರಾಟ ಮಾಡಿ ಹಣ ಮಾಡುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದುಬಂದಿದೆ.

ಮಾರಿಹಾಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ತಂಡ, ತಾಂತ್ರಿಕ ಮಾಹಿತಿ ಹಾಗೂ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿತ್ತು. ಈ ಯಶಸ್ವಿ ಕಾರ್ಯಾಚರಣೆಯಲ್ಲಿ:

ಸಿಪಿಐ ಐ.ಆರ್. ಪಟ್ಟಣಶೆಟ್ಟಿ

ಪಿಎಸ್ಐ ಮಂಜುನಾಥ ಹುಲಕುಂದ

ಪಿಎಸ್ಐ ಚಂದ್ರಶೇಖರ

ಸಿಸಿಬಿ ವಿಭಾಗದ ಪಿಎಸ್ಐ ಮಂಜುನಾಥ ಭಜಂತ್ರಿ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ತನಿಖಾ ತಂಡದ ಈ ಸಮಯಪ್ರಜ್ಞೆ ಮತ್ತು ಕಾರ್ಯಕ್ಷಮತೆಯನ್ನು ನಗರ ಪೊಲೀಸ್ ಆಯುಕ್ತರು ಹಾಗೂ ಡಿಸಿಪಿ ಅವರು ಮುಕ್ತಕಂಠದಿಂದ ಶ್ಲಾಘಿಸಿ, ಅಭಿನಂದನೆ ಸಲ್ಲಿಸಿದ್ದಾರೆ. ಸದ್ಯ ಈ ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನುಳಿದ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !