ಹೊಸದಿಗಂತ ವರದಿ ಬಳ್ಳಾರಿ:
ಬ್ಯಾನರ್ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ನಡೆದ ಗುಂಪು ಘರ್ಷಣೆ, ಕಲ್ಲು ತೂರಾಟ ಹಾಗೂ ಗುಂಡಿನ ದಾಳಿಯಲ್ಲಿ ಮೃತಪಟ್ಟ ಕೈ ಕಾರ್ಯಕರ್ತ ರಾಜಶೇಖರ್ ರೆಡ್ಡಿ ಪ್ರಕರಣವನ್ನು ಮುಚ್ಚಿ ಹಾಕುವ ಹುನ್ನಾರ ನಡೆದಿದೆ, ಶವ ಸಂಸ್ಕಾರ ವಿಚಾರದಲ್ಲಿ ನಡೆದ ಗೌಪ್ಯತೆಯ ಕುರಿತು ವಿಡಿಯೋ ರಿಲೀಸ್ ಮಾಡಿರುವೆ, ಇನ್ನಾದರೂ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಶಾಸಕ ಭರತ್ ರೆಡ್ಡಿ ಹಾಗೂ ಸಹಚರರನ್ನು ಕೂಡಲೇ ಬಂಧಿಸಬೇಕು ಎಂದು ಶಾಸಕ ಗಾಲಿ ಜನಾರ್ಧನ್ ರೆಡ್ಡಿ ಅವರು ಒತ್ತಾಯಿಸಿದರು.
ನಗರದ ಶಾಸಕ ಜನಾರ್ಧನ್ ರೆಡ್ಡಿ ಅವರ ನಿವಾಸದ ಕಚೇರಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಘಟನೆಯಲ್ಲಿ ಕೈ ಕಾರ್ಯಕರ್ತ ರಾಜಶೇಖರ್ ರೆಡ್ಡಿಗೆ ನೇರವಾಗಿ ಶಾಸಕ ಭರತ್ ರೆಡ್ಡಿ, ಸತೀಶ್ ರೆಡ್ಡಿ ಅವರ ಗನ್ ಮ್ಯಾನ್ ಗನ್ ನಿಂದ ಗುಂಡು ಹಾರಿದೆ. ಈ ಕುರಿತು ವಿಡಿಯೋ ರಿಲೀಸ್ ಮಾಡಿರುವೆ, ಅಂತ್ಯಕ್ರಿಯೆ ವಿಚಾರದಲ್ಲಿ ನಡೆದ ಹತ್ಯೆಯ ಮುಚ್ಚಿ ಹಾಕುವ ಹುನ್ನಾರ ಕುರಿತು ಮತ್ತೊಂದು ವಿಡಿಯೋ ರಿಲೀಸ್ ಮಾಡಿರುವೆ.
ಸೋಮು ಎನ್ನುವ ಸ್ಮಶಾನ ಕಾಯುವ ಯುವಕ ರಘು ಎನ್ನುವವರಿಗೆ ಕರೆ ಮಾಡಿ ಗುಂಡಿ ತೆಗೆಯಲು ಹೇಳ್ತಾರೆ, ಸ್ಥಳಕ್ಕೆ ಪೋಲೀಸ್ ರು ಬಂದು ಫೋಟೋ, ವಿಡಿಯೋ ಚಿತ್ರೀಕರಿಸಿ ಹೋಗಿದ್ದಾರೆ. ನಂತ್ರ ಸೋಮುಗೆ ಮತ್ತೊಂದು ಕರೆ ಬಂದ ಕೂಡಲೇ ಗುಂಡಿಯಲ್ಲಿ ಹುಳುವುದು ಬೇಡ, ಅದನ್ನು ಮುಚ್ಚಿ ಎಂದು ಸೂಚನೆ ಬಂದಿದೆ.
ಒಮ್ಮೆ ಗುಂಡಿ ತೆಗೆದ್ರೆ ಹಾಗೇ ಮುಚ್ಚುವ ಹಾಗಿಲ್ಲ, ಅದಕ್ಕೆ ಕಾಯಿ ಇಟ್ಟು ಮುಚ್ಚಬೇಕು. ಸೋಮುವನ್ನು ಈಬಗ್ಗೆ ಪ್ರಶ್ನಿಸಿದಾಗ ಗೊತ್ತಿಲ್ಲ ಶಾಸಕರು ಗುಂಡಿ ಮುಚ್ಚಲು ಹೇಳಿದ್ದಾರೆ ಎಂದು ಹೇಳ್ತಾರೆ. ಹತ್ಯೆಯಾದ ರಾಜಶೇಖರ್ ರೆಡ್ಡಿ ಸ್ನೇಹಿತರೇ ಸೋಮು ಬಳಿ ತೆರಳಿ ಎನ್ ಮಾಡೋದು ದೊಡ್ಡವರು ಹೇಳಿದ್ದಾರೆ, ಸುಡಬೇಕು ಸುಟ್ಟಿದ್ದೇವೆ ಎಂದಿದ್ದಾರೆ. ಹತ್ಯೆ ಪ್ರಕರಣದ ಯಾವುದೇ ಸಾಕ್ಷಿ ಸಿಗಬಾರದು ಎಂದು ಶಾಸಕ ಭರತ್ ರೆಡ್ಡಿ ಹಾಗೂ ಸಹಚರರು ಹೀಗೆ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ರಾಜಶೇಖರ್ ರೆಡ್ಡಿ ಶವ ಸಂಸ್ಕಾರವನ್ನು ಕಟ್ಟಿಗೆಯಿಂದ ದಹನ ಮಾಡಿಲ್ಲ, ಅದನ್ನು ಗ್ಯಾಸ್ ಎಲೆಕ್ಟ್ರಿಕ್ ಮೂಲಕ ದಹನ ಮಾಡಿದ್ದಾರೆ. ಈ ಕುರಿತು ಪೋಲೀಸ್ ರಿಗೆ ಎಲ್ಲ ಮಾಹಿತಿ ಇದ್ದರೂ ಕೈಕಟ್ಟಿ ಕುಳಿತಿದ್ದಾರೆ. ಹೊಸ ಡಿಐಜಿ ಬಂದಿದ್ದು, ಇಲ್ಲಿವರೆಗೂ ಆರೋಪಿತರನ್ನು ಬಂಧಿಸಿಲ್ಲ. ಘರ್ಷಣೆಯಲ್ಲಿ ನಡೆದ ಗುಂಡಿನ ದಾಳಿ ಮಿಸ್ ಫೈರಿಂಗ್ ಅಲ್ಲ, ಅದು ಪೂರ್ವ ನಿಯೋಜಿತ ಹತ್ಯೆ, ಈ ಹಿನ್ನೆಲೆಯಲ್ಲಿ ಶಾಸಕ ಭರತ್ ರೆಡ್ಡಿ ಹಾಗೂ ಸತೀಶ್ ಅವರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು.
ಭರತ್ ರೆಡ್ಡಿ ಬೆಂಬಲಕ್ಕೆ ಸರ್ಕಾರ ನಿಂತಿದೆ. ಪೊಲೀಸರ ಹಾಗೂ ಸಿಐಡಿ ತನಿಖೆಯಲ್ಲಿ ನ್ಯಾಯ ಸಿಗುವ ಸಾಧ್ಯತೆಯಿಲ್ಲ. ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದರು.
ಬ್ಯಾನರ್ ಗಲಾಟೆ ಪ್ರಕರಣವನ್ನು ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳುವ ವಿಶ್ವಾಸವಿತ್ತು. ಅದು ಹುಸಿಯಾಗಿದೆ. ಭರತ್ ರೆಡ್ಡಿ ಅವರ ಶಾಂತಿ ದೂತನಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಬಳ್ಳಾರಿಗೆ ಬಂದಿದ್ದಾರೆ. ಪೊಲೀಸರ ಕಣ್ಮುಂದೆ ಎಲ್ಲವೂ ನಡೆದರೂ ಭರತ್ ರೆಡ್ಡಿ ಅವರನ್ನು ಇಲ್ಲಿವರೆಗೆ ಬಂಧಿಸದಿರುವುದು ಅನುಮಾನ ಮೂಡಿಸಿದೆ.
ಇದನ್ನೂ ಓದಿ: FOOD | 10 ನಿಮಿಷಗಳಲ್ಲಿ ರೆಡಿ ಆಗುತ್ತೆ ಬಿಸಿಬಿಸಿ ಮಸಾಲ ರೈಸ್!
ಸೋಮಶೇಖರ್ ರೆಡ್ಡಿ, ಶ್ರೀರಾಮುಲು ಅವರ ಜೊತೆಗೆ ಯಾರಾದ್ರೂ ಖಾಸಗಿ ಗನ್ ಇದ್ರಾ, ಪ್ರಕರಣದಲ್ಲಿ ಅವರನ್ನು ಯಾಕೆ ಹೊಣೆ ಮಾಡ್ತಿದ್ದಾರೆ ತಿಳಿಯದಾಗಿದೆ. ನಾವೇನು ದೌರ್ಜನ್ಯ ಮಾಡಿದ್ವಾ, ಅವರೇ ನಮ್ಮ ಮನೆ ಮುಂದೆ ಗನ್ ಹಿಡ್ಕೊಂಡು ಬಂದು ಗಲಾಟೆ ಮಾಡಿದ್ದಾರೆ. ಪೋಲೀಸ್ ಇಲಾಖೆಯ ಪ್ರಾಮಾಣಿಕ ಅಧಿಕಾರಿಗಳು ಬಂದಿದ್ದು, 24 ಗಂಟೆ ಕಳೆದಿವೆ, ಇಲ್ಲಿವರೆಗೂ ಕ್ರಮಕ್ಕೆ ಮುಂದಾಗಿಲ್ಲ, ಇನ್ನೆರಡು ದಿನ ಕಾದುನೋಡಿ ನ್ಯಾಯಾಲಯದ ಮೊರೆ ಹೋಗುವೆ ಎಂದರು.
ಎಎಸ್ಪಿ ರವಿ ಕುಮಾರ್ ಕುತಂತ್ರದಿಂದ ಎಸ್ಪಿ ಪವನ್ ನೆಜ್ಜೂರ್ ಬಲಿಯಾಗಿದ್ದಾರೆ. ಜೊತೆಗೆ ಐಜಿ ವರ್ತಿಕಾ ಕಟಿ ಯಾರ್ ಕೂಡಾ ಬಲಿಯಾದರು, ಕೂಡಲೇ ರವಿಕುಮಾರ್ ಹಾಗೂ ಡಿವೈಎಸ್ಪಿ ಚಂದ್ರಕಾಂತ್ ನಂದಾ ರೆಡ್ಡಿ ಅವರನ್ನು ಅಮಾನತ್ತುಗೊಳಿಸಬೇಕು ಎಂದರು.

