ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಳ್ಳಾರಿಯಲ್ಲಿ ನಡೆದ ಹಿಂಸಾಚಾರಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಪ್ರೇರಣೆ ಎಂದು ಗಂಭೀರ ಆರೋಪ ಮಾಡಿದ್ದ ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್ ವಿರುದ್ಧ ಈಗ ಕಾನೂನು ಸಮರ ಆರಂಭವಾಗಿದೆ. ಲಕ್ಷ್ಮಣ್ ಅವರ ಹೇಳಿಕೆಯು ಸಮಾಜದಲ್ಲಿ ಅಶಾಂತಿ ಹರಡುವ ಉದ್ದೇಶ ಹೊಂದಿದೆ ಎಂದು ಆರೋಪಿಸಿ ಬಿಜೆಪಿ ಶಾಸಕ ಶ್ರೀವತ್ಸ ಅವರು ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎ. ಸಲೀಂ ಅವರಿಗೆ ಅಧಿಕೃತ ದೂರು ನೀಡಿದ್ದಾರೆ.
ಮೈಸೂರಿನ ಕಾಂಗ್ರೆಸ್ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಎಂ. ಲಕ್ಷ್ಮಣ್, ಬಳ್ಳಾರಿಯ ಗಲಭೆ ಮತ್ತು ಕಾಂಗ್ರೆಸ್ ಕಾರ್ಯಕರ್ತನ ಸಾವಿಗೆ ಅಮಿತ್ ಶಾ ಅವರೇ ನೇರ ಹೊಣೆ ಎಂದು ಆರೋಪಿಸಿದ್ದರು. “ಕೇಂದ್ರ ಸಚಿವ ವಿ. ಸೋಮಣ್ಣ ಅವರು ಅಮಿತ್ ಶಾ ಅವರ ಸಂದೇಶವನ್ನು ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಅವರಿಗೆ ತಲುಪಿಸಿದ್ದಾರೆ. ‘ಹೆಣ ಬೀಳಿಸಿ ರಾಜಕಾರಣ ಮಾಡಿ’ ಎಂದು ಶಾ ಸೂಚನೆ ನೀಡಿದ್ದಾರೆ. ಸಚಿವ ಸೋಮಣ್ಣ ಅವರಿಗೆ ಬ್ರೈನ್ ಮ್ಯಾಪಿಂಗ್ ಪರೀಕ್ಷೆ ನಡೆಸಿದರೆ ಈ ಪಿತೂರಿಯ ಸತ್ಯ ಹೊರಬರಲಿದೆ” ಎಂದು ಸ್ಫೋಟಕ ಹೇಳಿಕೆ ನೀಡಿದ್ದರು.
ಈ ಹೇಳಿಕೆಯನ್ನು ಸುಳ್ಳು ಮತ್ತು ಪ್ರಚೋದನಾಕಾರಿ ಎಂದು ಕರೆದಿರುವ ಬಿಜೆಪಿ ಶಾಸಕ ಶ್ರೀವತ್ಸ, ಬೆಂಗಳೂರಿನಲ್ಲಿ ಡಿಜಿಪಿ ಅವರನ್ನು ಭೇಟಿ ಮಾಡಿ ದೂರು ಸಲ್ಲಿಸಿದರು. “ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಗಳು ಇಂತಹ ಆಧಾರರಹಿತ ಮತ್ತು ಸಮಾಜದಲ್ಲಿ ದ್ವೇಷ ಬಿತ್ತುವ ಸುಳ್ಳು ಸುದ್ದಿಗಳನ್ನು ಹರಡುವುದು ಅಪರಾಧ. ಪೊಲೀಸರು ಈ ಕೂಡಲೇ ಕ್ರಮ ಕೈಗೊಳ್ಳುತ್ತಾರೆ ಎಂಬ ಭರವಸೆ ನಮಗಿದೆ” ಎಂದು ಶ್ರೀವತ್ಸ ತಿಳಿಸಿದ್ದಾರೆ.


