ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಫೆಬ್ರವರಿಯಲ್ಲಿ ಅಂತಿಮ ಮತದಾರರ ಪಟ್ಟಿ ಪ್ರಕಟವಾದ ತಕ್ಷಣವೇ ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗಲಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಹೇಳಿದ್ದಾರೆ.
ಕೋಚ್ ಬಿಹಾರ್ ಜಿಲ್ಲೆಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ, ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯು ಮತದಾರರಲ್ಲಿ ಭಯ ಮೂಡಿಸಲು ಬಳಸಲಾಗುತ್ತಿದೆ . ಎಸ್‌ಐಆರ್‌ನ ಅಂತಿಮ ಪಟ್ಟಿ ಫೆಬ್ರವರಿಯಲ್ಲಿ ಹೊರಬಂದ ತಕ್ಷಣವೇ ಚುನಾವಣೆ ಘೋಷಿಸುತ್ತಾರೆ. ಇದರಿಂದ ಯಾರೂ ಆ ಪಟ್ಟಿಯನ್ನು ಕಾನೂನುಬದ್ಧವಾಗಿ ಪ್ರಶ್ನಿಸಲು ಸಾಧ್ಯವಾಗುವುದಿಲ್ಲ. ಆ ಪಟ್ಟಿಯ ಆಧಾರದ ಮೇಲೆ ಚುನಾವಣೆ ನಡೆಸಲಾಗುತ್ತದೆ ಎಂದು ಹೇಳಿದರು.
ನವೆಂಬರ್ 4 ರಂದು ಚುನಾವಣಾ ಆಯೋಗವು ಜಾರಿಗೆ ತಂದ ಎಸ್‌ಐಆರ್ ಪ್ರಕ್ರಿಯೆಯು ಜನರ ಮನಸ್ಸಿನಲ್ಲಿ ವ್ಯಾಪಕ ಭಯ ಸೃಷ್ಟಿಸಿದೆ ಎಂದು ಬ್ಯಾನರ್ಜಿ ಆರೋಪಿಸಿದರು. ತಮ್ಮ ಹೆಸರು ಮತದಾರರ ಪಟ್ಟಿಯಿಂದ ಅನಿಯಂತ್ರಿತವಾಗಿ ತೆಗೆದುಹಾಕಲ್ಪಡಬಹುದು ಎಂಬ ಆತಂಕ ಜನರಲ್ಲಿ ಮೂಡಿದೆ ಎಂದು ಅವರು ತಿಳಿಸಿದರು.
ನಾವು ನಮ್ಮ ಪೌರತ್ವವನ್ನು ಸಾಬೀತುಪಡಿಸಬೇಕೇ? ಇದು ಎಷ್ಟು ದೊಡ್ಡ ಅವಮಾನ? ತಲೆತಲಾಂತರದಿಂದ ಇಲ್ಲಿ ವಾಸಿಸುತ್ತಿರುವ ಜನರಿಗೆ, ಅವರು ಯಾರೆಂದು ಸಾಬೀತುಪಡಿಸಲು ಕೇಳಲಾಗುತ್ತಿದೆ ಎಂದು ಅವರು ಪ್ರಶ್ನಿಸಿದರು.
ಬಿಜೆಪಿ ನೇತೃತ್ವದ ಸರ್ಕಾರವು ಅರಾಜಕ ಮತ್ತು ಸರ್ವಾಧಿಕಾರಿ ಆಡಳಿತ ನಡೆಸುತ್ತಿದೆ ಎಂದು ಆರೋಪಿಸಿದರು. ಬಿಜೆಪಿ ಅಧಿಕಾರಕ್ಕೆ ಬಂದರೆ, ಬಂಗಾಳದ ಸಂಸ್ಕೃತಿ, ಭಾಷೆ ಮತ್ತು ಪರಂಪರೆಯನ್ನು ನಾಶಪಡಿಸುತ್ತದೆ ಎಂದು ಅವರು ಹೇಳಿದರು.
ತಮ್ಮ ಸರ್ಕಾರವು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯನ್ನು ತಡೆದಿದ್ದರೆ, ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರುತ್ತಿತ್ತು ಎಂದು ಬ್ಯಾನರ್ಜಿ ಹೇಳಿಕೊಂಡರು.ಅವರು ಅವಕಾಶಕ್ಕಾಗಿ ಕಾಯುತ್ತಿದ್ದರು. ನಾವು ಎಸ್‌ಐಆರ್ ಅನ್ನು ತಡೆದಿದ್ದರೆ, ಇಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲ್ಪಡುತ್ತಿತ್ತು ಎಂದು ಅವರು ಆರೋಪಿಸಿದರು.

