ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ಮತ್ತು ಬೆಳಗಾವಿ ನಡುವೆ ಸಂಚರಿಸಲಿರುವ ನೂತನ ವಂದೇ ಭಾರತ್ ರೈಲಿಗೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು. ಇದರೊಂದಿಗೆ ರಾಜ್ಯದಲ್ಲಿ ವಂದೇ ಭಾರತ್ ರೈಲುಗಳ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಈ ಮೂಲಕ ಕರ್ನಾಟಕದ ಜನತೆಗೆ ಮತ್ತೊಂದು ನಿರೀಕ್ಷಿತ ವೇಗದ ರೈಲು ಸೇವೆ ದೊರಕಿದೆ.
2019ರಲ್ಲಿ ದೆಹಲಿ–ವಾರಣಾಸಿ ಮಾರ್ಗದಲ್ಲಿ ದೇಶದ ಮೊದಲ ವಂದೇ ಭಾರತ್ ಸೇವೆ ಪ್ರಾರಂಭಗೊಂಡಿದ್ದು, ನಂತರ ಹಂತ ಹಂತವಾಗಿ ಬೇಡಿಕೆಗೆ ಅನುಗುಣವಾಗಿ ರೈಲುಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಪ್ರಸ್ತುತ ದೇಶಾದ್ಯಂತ 73 ವಂದೇ ಭಾರತ್ ರೈಲುಗಳು ಸಂಚರಿಸುತ್ತಿವೆ. ಭಾನುವಾರ ಪ್ರಧಾನಿ ಮೋದಿ ಅವರು ಬೆಂಗಳೂರು–ಬೆಳಗಾವಿ ಸೇರಿ ಮೂರು ಹೊಸ ಮಾರ್ಗಗಳಲ್ಲಿ ರೈಲುಗಳನ್ನು ಉದ್ಘಾಟಿಸಿದರು.
ಕರ್ನಾಟಕದಲ್ಲಿ ಭವಿಷ್ಯದಲ್ಲಿ ಸಾಧ್ಯವಿರುವ ಹೊಸ ಮಾರ್ಗಗಳು
ಮುಂದಿನ ದಿನಗಳಲ್ಲಿ ಬೆಂಗಳೂರು–ಮಂಗಳೂರು, ಬೆಂಗಳೂರು–ತಿರುವನಂತಪುರಂ, ಶಿವಮೊಗ್ಗ–ಬೆಂಗಳೂರು, ಮೈಸೂರು–ತಿರುಪತಿ, ಹುಬ್ಬಳ್ಳಿ–ತಿರುಪತಿ ಹಾಗೂ ಬೆಂಗಳೂರು–ವಿಜಯಪುರ ಮಾರ್ಗಗಳಲ್ಲಿ ವಂದೇ ಭಾರತ್ ಸೇವೆ ಆರಂಭಿಸುವ ಯೋಜನೆಗಳಿವೆ.
ಮೂರು ಹೊಸ ವಂದೇ ಭಾರತ್ ರೈಲುಗಳ ವಿವರ
ಬೆಂಗಳೂರು–ಬೆಳಗಾವಿ ವಂದೇ ಭಾರತ್ ಎಕ್ಸ್‌ಪ್ರೆಸ್:
611 ಕಿ.ಮೀ ದೂರವನ್ನು ಕೇವಲ 8.5 ಗಂಟೆಗಳಲ್ಲಿ ಕ್ರಮಿಸುವ ಈ ರೈಲು, ಬೆಂಗಳೂರಿನಿಂದ ಬೆಳಗಾವಿಗೆ ಪ್ರಯಾಣ ಸಮಯವನ್ನು ಹಾಲಿ ಸೇವೆಗಳಿಗಿಂತ 1 ಗಂಟೆ 20 ನಿಮಿಷ ಕಡಿಮೆ ಮಾಡುತ್ತದೆ. ಬೆಳಿಗ್ಗೆ 5:20ಕ್ಕೆ ಬೆಳಗಾವಿಯಿಂದ ಹೊರಟು ಮಧ್ಯಾಹ್ನ 1:50ಕ್ಕೆ ಬೆಂಗಳೂರನ್ನು ತಲುಪುತ್ತದೆ. ಹಿಂದಿರುಗುವ ಪ್ರಯಾಣ ಮಧ್ಯಾಹ್ನ 2:20ಕ್ಕೆ ಪ್ರಾರಂಭವಾಗಿ ರಾತ್ರಿ 10:40ಕ್ಕೆ ಬೆಳಗಾವಿಗೆ ತಲುಪುತ್ತದೆ.
ಅಜ್ನಿ (ನಾಗ್ಪುರ)–ಪುಣೆ ವಂದೇ ಭಾರತ್ ಎಕ್ಸ್‌ಪ್ರೆಸ್:
881 ಕಿ.ಮೀ ದೂರ ಕ್ರಮಿಸುವ ಈ ದೀರ್ಘ ಮಾರ್ಗದ ರೈಲು ವಾರ್ಧಾ, ಅಕೋಲಾ, ಶೇಗಾಂವ್, ಭೂಸಾವಲ್, ಜಲಗಾಂವ್, ಮನ್ಮಾಡ್ ಮತ್ತು ಅಹ್ಮದ್‌ನಗರ ಸೇರಿ 10 ನಿಲ್ದಾಣಗಳಲ್ಲಿ ನಿಲ್ಲುತ್ತದೆ. ಮಂಗಳವಾರ ಹೊರತುಪಡಿಸಿ ವಾರದಲ್ಲಿ ಆರು ದಿನ ಸಂಚರಿಸುತ್ತದೆ.
ಅಮೃತಸರ–ಶ್ರೀ ಮಾತಾ ವೈಷ್ಣೋ ದೇವಿ ಕತ್ರಾ ವಂದೇ ಭಾರತ್ ಎಕ್ಸ್‌ಪ್ರೆಸ್:
ಯಾತ್ರಾ ಕೇಂದ್ರಗಳಾದ ಅಮೃತಸರ ಮತ್ತು ಕತ್ರಾವನ್ನು ಸಂಪರ್ಕಿಸುವ ಈ ರೈಲು ಸೋಮವಾರ ಹೊರತುಪಡಿಸಿ ವಾರದಲ್ಲಿ ಆರು ದಿನ ಸಂಚರಿಸುತ್ತದೆ. ಜಮ್ಮು, ಪಠಾಣ್‌ಕೋಟ್ ಕ್ಯಾಂಟ್, ಜಲಂಧರ್ ಸಿಟಿ ಹಾಗೂ ವ್ಯಾಸ್‌ನಲ್ಲಿ ನಿಲುಗಡೆ ಇರುತ್ತದೆ.