ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಸತತ ಪ್ರಯತ್ನದ ಫಲವಾಗಿ, ರಾಜ್ಯದ ಜನತೆಗೆ ಕೇಂದ್ರ ಸರ್ಕಾರವು ದೀಪಾವಳಿ ಸಂದರ್ಭದಲ್ಲಿ ಮತ್ತೊಂದು ಸಿಹಿ ಸುದ್ದಿಯನ್ನು ನೀಡಿದೆ. ರಾಜಧಾನಿ ಬೆಂಗಳೂರು ಮತ್ತು ವಾಣಿಜ್ಯ ನಗರಿ ಹುಬ್ಬಳ್ಳಿಯ ನಡುವೆ ನಿತ್ಯವೂ ಸಂಚರಿಸುವ ‘ಸೂಪರ್ ಫಾಸ್ಟ್ ವಿಶೇಷ ರೈಲು’ ಸಂಚಾರಕ್ಕೆ ಅನುಮೋದನೆ ದೊರೆತಿದೆ.
ಕೇಂದ್ರ ಸರ್ಕಾರವು ಹುಬ್ಬಳ್ಳಿ-ಬೆಂಗಳೂರು ಮಾರ್ಗದಲ್ಲಿ ಡಿಸೆಂಬರ್ 8 ರಿಂದ ಪ್ರತಿದಿನವೂ ಈ ವಿಶೇಷ ಸೂಪರ್ ಫಾಸ್ಟ್ ರೈಲು ಸಂಚಾರಕ್ಕೆ ಅನುಮತಿ ನೀಡಿದೆ. ಇದರಂತೆ, ರೈಲು ಸಂಖ್ಯೆ: 20687 ಮತ್ತು 20688 SBC ಈ ಮಾರ್ಗದಲ್ಲಿ ನಿಯತಕಾಲಿಕವಾಗಿ ತನ್ನ ಸಂಚಾರವನ್ನು ಆರಂಭಿಸಲಿವೆ.
ಕೇಂದ್ರ ಸಚಿವರ ಒತ್ತಾಯಕ್ಕೆ ಸ್ಪಂದನೆ:
ರಾಜಧಾನಿ ಬೆಂಗಳೂರು ಮತ್ತು ಉತ್ತರ ಕರ್ನಾಟಕದ ಜೀವನಾಡಿಯಂತಿರುವ ಹುಬ್ಬಳ್ಳಿಯ ನಡುವೆ ಹೆಚ್ಚಿನ ಪ್ರಯಾಣಿಕರ ಸಂಪರ್ಕ ಇರುವುದನ್ನು ಮನಗಂಡು, ಧಾರವಾಡ ಸಂಸದರೂ ಆಗಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಇತ್ತೀಚೆಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ರೈಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಅವರಿಗೆ ಮನವಿ ಸಲ್ಲಿಸಿ, ಹೊಸ ರೈಲು ಸೇವೆ ಆರಂಭಿಸುವಂತೆ ಒತ್ತಾಯಿಸಿದ್ದರು. ಸಚಿವ ಜೋಶಿ ಅವರ ಈ ಒತ್ತಾಸೆಗೆ ಸ್ಪಂದಿಸಿದ ರೈಲ್ವೆ ಸಚಿವದ್ವಯರು, ಇದೀಗ ಬೆಂಗಳೂರು-ಹುಬ್ಬಳ್ಳಿ ಮಾರ್ಗದಲ್ಲಿ ಮತ್ತೊಂದು ಸೂಪರ್ ಫಾಸ್ಟ್ ವಿಶೇಷ ರೈಲು ಸಂಚಾರಕ್ಕೆ ಅನುಮೋದನೆ ನೀಡುವ ಮೂಲಕ ಕ್ರಮ ಕೈಗೊಂಡಿದ್ದಾರೆ.
ಮಧ್ಯ ಕರ್ನಾಟಕಕ್ಕೂ ಲಾಭ:
ಈ ಹೊಸ ಸೂಪರ್ ಫಾಸ್ಟ್ ರೈಲು ಹುಬ್ಬಳ್ಳಿ, ಕರ್ಜಗಿ, ಹಾವೇರಿ, ರಾಣೆಬೆನ್ನೂರು, ದಾವಣಗೆರೆ, ಬಿರೂರು, ಅರಸಿಕೆರೆ, ಸಂಪಿಗೆ ರೋಡ್, ತುಮಕೂರು, ಯಶವಂತಪುರ ಮತ್ತು ಕೆಎಸ್‌ಆರ್ ಬೆಂಗಳೂರು ನಿಲ್ದಾಣಗಳ ಮಧ್ಯೆ ಸಂಚರಿಸಲಿದೆ. ಈ ಸೇವೆಯು ರಾಜಧಾನಿ ಮತ್ತು ಉತ್ತರ ಕರ್ನಾಟಕವನ್ನು ಮಾತ್ರವಲ್ಲದೆ, ಮಧ್ಯ ಕರ್ನಾಟಕಕ್ಕೂ ಪ್ರಮುಖ ಸಂಪರ್ಕ ಸೇತುವಾಗಿ ಕಾರ್ಯನಿರ್ವಹಿಸಲಿದೆ. ಇದರಿಂದಾಗಿ ರಾಜ್ಯದ ಸುಮಾರು ಏಳೆಂಟು ಜಿಲ್ಲೆಗಳ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ.

