February 3, 2026
Tuesday, February 3, 2026
spot_img

77ನೇ ಗಣರಾಜ್ಯೋತ್ಸವಕ್ಕೆ ಬೆಂಗಳೂರು ಸಜ್ಜು | ಆನ್‌ಲೈನ್‌ನಲ್ಲಿ ಸಿಗಲಿದೆ ಇ–ಪಾಸ್: ಸೀಮಂತ್ ಕುಮಾರ್ ಸಿಂಗ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗಣರಾಜ್ಯೋತ್ಸವವನ್ನು ವೈಭವದಿಂದ ಆಚರಿಸಲು ರಾಜಧಾನಿ ಬೆಂಗಳೂರು ಸಜ್ಜಾಗಿದೆ. 77ನೇ ಗಣರಾಜ್ಯೋತ್ಸವದ ರಾಜ್ಯಮಟ್ಟದ ಸಮಾರಂಭ ಜನವರಿ 26ರಂದು ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ನಡೆಯಲಿದ್ದು, ಸಾರ್ವಜನಿಕರ ಪಾಲ್ಗೊಳ್ಳುವಿಕೆಗೆ ಆನ್‌ಲೈನ್ ಮೂಲಕ 2,000 ಇ–ಪಾಸ್ ವ್ಯವಸ್ಥೆ ಮಾಡಲಾಗಿದೆ ಎಂದು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಗಣರಾಜ್ಯೋತ್ಸವದ ಭದ್ರತೆ ಹಾಗೂ ವ್ಯವಸ್ಥೆಗಳ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರೇಡ್‌ನಲ್ಲಿ 516 ಮಂದಿ ನೇರವಾಗಿ ಭಾಗವಹಿಸಲಿದ್ದು, ಭದ್ರತೆಗಾಗಿ ಸುಮಾರು 2,000 ಪೊಲೀಸರು ನಿಯೋಜನೆಗೊಳ್ಳಲಿದ್ದಾರೆ ಎಂದರು. ಕಾರ್ಯಕ್ರಮ ಬೆಳಗ್ಗೆ 8:58ಕ್ಕೆ ಆರಂಭವಾಗಲಿದ್ದು, ಸಾರ್ವಜನಿಕರು 8 ಗಂಟೆಯೊಳಗೆ ಮೈದಾನಕ್ಕೆ ಆಗಮಿಸಬೇಕೆಂದು ಮನವಿ ಮಾಡಲಾಗಿದೆ.

ಜನವರಿ 26ರಂದು ಬೆಳಗ್ಗೆ 8:30ರಿಂದ 10:30ರವರೆಗೆ ಕಬ್ಬನ್ ರಸ್ತೆ, ಎಂಜಿ ರಸ್ತೆ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಸಂಚಾರ ನಿರ್ಬಂಧ ಹಾಗೂ ಪಾರ್ಕಿಂಗ್ ನಿಷೇಧ ಜಾರಿಯಲ್ಲಿರಲಿದೆ. ಸಂಚಾರ ನಿಯಂತ್ರಣಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿದೆ.

ಬೆಳಗ್ಗೆ 9 ಗಂಟೆಗೆ ರಾಜ್ಯಪಾಲರಿಂದ ಧ್ವಜಾರೋಹಣ ನಡೆಯಲಿದೆ. ಬಳಿಕ ಗೌರವ ಸ್ವೀಕಾರ ಮತ್ತು ರಾಜ್ಯಪಾಲರ ಸಂದೇಶ ಇರಲಿದೆ. ಪಥಸಂಚಲನದಲ್ಲಿ ಆರ್ಮಿ, ಏರ್‌ಫೋರ್ಸ್, ಸಿಆರ್‌ಪಿಎಫ್, ತಮಿಳುನಾಡು ಪೊಲೀಸ್ ಪಡೆ ಸೇರಿದಂತೆ ವಿವಿಧ ದಳಗಳು ಭಾಗವಹಿಸಲಿವೆ. ಒಟ್ಟು 37 ತುಕಡಿಗಳಲ್ಲಿ ಸುಮಾರು 1,100 ಮಂದಿ ಕವಾಯತು ಮತ್ತು ಬ್ಯಾಂಡ್ ಪ್ರದರ್ಶನ ನೀಡಲಿದ್ದಾರೆ.

ಶಾಲಾ ಮಕ್ಕಳಿಂದ ಎರಡು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸುಮಾರು 1,400 ಮಕ್ಕಳು ಪಾಲ್ಗೊಳ್ಳಲಿದ್ದಾರೆ. ಭದ್ರತೆಗೆ 100 ಸಿಸಿ ಕ್ಯಾಮೆರಾ, ನಾಲ್ಕು ಬ್ಯಾಗೇಜ್ ಸ್ಕ್ಯಾನರ್‌ಗಳನ್ನು ಅಳವಡಿಸಲಾಗಿದೆ. ಸೇವಾಸಿಂಧು ವೆಬ್‌ಸೈಟ್ ಮೂಲಕ ಪಾಸ್ ಪಡೆಯಬಹುದಾಗಿದ್ದು, ಪ್ರವೇಶದ ವೇಳೆ ಗುರುತಿನ ಚೀಟಿ ಕಡ್ಡಾಯವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !