Friday, October 3, 2025

ಬೆಂಗಳೂರಿನ ಮೂಲಸೌಕರ್ಯ ವಿವಾದ: ಆಂಧ್ರ ಸಚಿವ ನಾರಾ ಲೋಕೇಶ್, ಪ್ರಿಯಾಂಕ್ ಖರ್ಗೆ ನಡುವೆ ಟ್ವೀಟ್ ವಾರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನ ರಸ್ತೆ ಗುಂಡಿ ಹಾಗೂ ಮೂಲಸೌಕರ್ಯ ಸಮಸ್ಯೆಗಳ ಕುರಿತ ಚರ್ಚೆ ಇನ್ನೂ ಮುಂದುವರಿಯುತ್ತಿದೆ. ಇತ್ತೀಚೆಗೆ ಬ್ಲಾಕ್ ಬಕ್ ಕಂಪನಿಯ ಸಿಇಓ ರಾಜೇಶ್ ಯಾಬಾಜಿ ಹಾಗೂ ಉದ್ಯಮಿ ಮೋಹನ್‌ದಾಸ್ ಪೈ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದರಿಂದ ಈ ವಿಷಯ ಮತ್ತಷ್ಟು ಚರ್ಚೆಗೆ ಕಾರಣವಾಯಿತು. ನಂತರ ತುರ್ತು ಕ್ರಮ ಕೈಗೊಂಡಿದ್ದ ಕರ್ನಾಟಕ ಸರ್ಕಾರ, ರಸ್ತೆಗುಂಡಿ ಮುಚ್ಚುವುದು ಹಾಗೂ ಐಟಿ ಕಂಪನಿಗಳಿಗೆ ಅಗತ್ಯ ಸೌಕರ್ಯ ಒದಗಿಸುವ ಭರವಸೆ ನೀಡಿತ್ತು. ಆದರೆ ಈ ವಿವಾದ ಅಷ್ಟಕ್ಕೇ ಮುಗಿದಿಲ್ಲ. ಆಂಧ್ರ ಪ್ರದೇಶದ ಸಚಿವ ನಾರಾ ಲೋಕೇಶ್ ಇತ್ತೀಚೆಗೆ ಮಾಡಿದ ಟ್ವೀಟ್ ಇದೀಗ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.

ಕ್ರಿಸ್ಟಿನ್ ಮ್ಯಾಥ್ಯೂ ಫಿಲಿಪ್ ಎಂಬ ಎಕ್ಸ್ ಹ್ಯಾಂಡಲ್‌ನಲ್ಲಿ ಹೊರ ವರ್ತುಲ ರಸ್ತೆಯ ಹದಗೆಟ್ಟ ಪರಿಸ್ಥಿತಿಯಿಂದ ಹಲವು ಸಂಸ್ಥೆಗಳು ಉತ್ತರ ಬೆಂಗಳೂರು ಹಾಗೂ ವೈಟ್‌ಫೀಲ್ಡ್ ಕಡೆಗೆ ಸಾಗುತ್ತಿವೆ ಎಂದು ಪೋಸ್ಟ್ ಮಾಡಲಾಗಿತ್ತು. ಅದಕ್ಕೆ ಪ್ರತಿಕ್ರಿಯಿಸಿದ ನಾರಾ ಲೋಕೇಶ್, “ಹೌದು, ಉತ್ತರದ ಕಡೆಗೆ ಪರಿಸ್ಥಿತಿ ಸ್ವಲ್ಪ ಉತ್ತಮವಾಗಿದೆ. ಇನ್ನೂ ಸ್ವಲ್ಪ ಉತ್ತರಕ್ಕೆ ಬನ್ನಿ, ಅನಂತಪುರದಲ್ಲಿ ನಾವು ವಿಶ್ವದರ್ಜೆಯ ಏರೋಸ್ಪೇಸ್ ಮತ್ತು ಡಿಫೆನ್ಸ್ ಎಕೋಸಿಸ್ಟಂ ಅಭಿವೃದ್ಧಿಪಡಿಸುತ್ತಿದ್ದೇವೆ” ಎಂದು ಬರೆದುಕೊಂಡಿದ್ದರು.

ಈ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಕರ್ನಾಟಕದ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ಟೀಕೆ ಮಾಡಿ ವ್ಯಂಗ್ಯವಾಡಿದ್ದಾರೆ. “ದುರ್ಬಲ ವ್ಯವಸ್ಥೆಯನ್ನು ಹೊಂದಿರುವವರು ಅದನ್ನು ಸುಧಾರಿಸಲು ಪ್ರಯತ್ನಿಸುವುದು ಸಹಜ. ಆದರೆ ಆ ಪ್ರಯತ್ನವೇ ಹತಾಶೆಯ ಹಂತಕ್ಕೆ ತಲುಪಿದರೆ, ಅದು ಇನ್ನಷ್ಟು ದುರ್ಬಲತೆಯ ಸಂಕೇತ” ಎಂದು ಹೇಳಿದ್ದಾರೆ. ಅಲ್ಲದೆ, ಬೆಂಗಳೂರಿನ ಬೆಳವಣಿಗೆ ಹಾಗೂ ಸಾಧನೆಗಳ ಪಟ್ಟಿಯನ್ನು ನೆನಪಿಗೆ ತಂದಿದ್ದಾರೆ.

ಪ್ರಿಯಾಂಕ್ ಖರ್ಗೆಯ ಪ್ರಕಾರ, 2035ರವರೆಗೆ ಬೆಂಗಳೂರಿನಲ್ಲಿ ಶೇ. 8.5ರಷ್ಟು ಜಿಡಿಪಿ ಬೆಳವಣಿಗೆ ನಿರೀಕ್ಷಿಸಲಾಗಿದೆ. 2025ರ ವೇಳೆಗೆ ಆಸ್ತಿ ಬೆಲೆಯಲ್ಲಿ ಶೇಕಡಾ 5ರಷ್ಟು ಏರಿಕೆ ಸಂಭವಿಸುವುದಾಗಿ ಅವರು ತಿಳಿಸಿದ್ದಾರೆ. ಜೊತೆಗೆ, ನಗರೀಕರಣ, ನಾವೀನ್ಯತೆ ಮತ್ತು ಆರ್ಥಿಕ ಬೆಳವಣಿಗೆಯ ವೇಗದಲ್ಲಿ ಜಾಗತಿಕ ಮಟ್ಟದಲ್ಲಿ ಶ್ರೇಯಾಂಕ ಪಡೆದಿರುವ ನಗರ ಬೆಂಗಳೂರು ಎಂದು ಉಲ್ಲೇಖಿಸಿದ್ದಾರೆ. 2025ರ ಹೊತ್ತಿಗೆ ನಗರದ ಜನಸಂಖ್ಯೆ 14.4 ದಶಲಕ್ಷ ತಲುಪುವ ನಿರೀಕ್ಷೆಯಿದ್ದು, ಇದು ಭಾರತದ ಪ್ರಮುಖ ವಲಸೆ ಕೇಂದ್ರಗಳಲ್ಲಿ ಒಂದಾಗಿದೆ ಎಂದೂ ಅವರು ಹೈಲೈಟ್ ಮಾಡಿದ್ದಾರೆ.

ಅಷ್ಟೇ ಅಲ್ಲದೆ, “ಇನ್ನೊಂದು ಜೀವಿಯಿಂದ ಪೋಷಕಾಂಶಗಳನ್ನು ಹೀರಿಕೊಂಡು ಬದುಕುವ ಜೀವಿಯನ್ನು ಏನೆಂದು ಕರೆಯುತ್ತಾರೆ?” ಎಂಬ ಪ್ರಶ್ನೆಯ ಮೂಲಕ ನಾರಾ ಲೋಕೇಶ್‌ ಅವರಿಗೆ ವ್ಯಂಗ್ಯ ಬಾಣ ಹಾರಿಸಿದ್ದಾರೆ.