ಹೊಸದಿಗಂತ ಡಿಜಿಟಲ್ ಡೆಸ್ಕ್:
ಡಿಸೆಂಬರ್ ಕೊನೆಯಲ್ಲಿ ರಾಜ್ಯದ ಹವಾಮಾನ ತೀವ್ರ ತಿರುವು ಪಡೆದುಕೊಂಡಿದ್ದು, ಹಲವೆಡೆ ಕನಿಷ್ಠ ತಾಪಮಾನ ದಾಖಲೆ ಮಟ್ಟಕ್ಕೆ ಇಳಿದಿದೆ. ಕಳೆದ ಎರಡು ದಿನಗಳಿಂದ ಮುಂಜಾನೆ ಸಮಯದಲ್ಲಿ ಒಂದಂಕಿಗೆ ಸಮೀಪಿಸಿದ ತಾಪಮಾನ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಚಳಿ ತೀವ್ರವಾಗಿದ್ದು, ಹವಾಮಾನ ಇಲಾಖೆಯು ಇನ್ನೂ ಎರಡು ದಿನಗಳ ಕಾಲ ಇದೇ ಪರಿಸ್ಥಿತಿ ಮುಂದುವರೆಯುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ.
ಬೀದರ್ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಕನಿಷ್ಠ ತಾಪಮಾನ 7 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದ್ದು, ಈ ಋತುವಿನ ಅತಿ ಕಡಿಮೆ ಮಟ್ಟಗಳಲ್ಲಿ ಒಂದಾಗಿ ದಾಖಲಾಗಿದೆ. ಉತ್ತರ ಒಳನಾಡಿನಲ್ಲಿ ಬೀಸುತ್ತಿರುವ ಶೀತಗಾಳಿಯ ಪರಿಣಾಮವಾಗಿ ಬೀದರ್, ಕಲಬುರಗಿ, ಯಾದಗಿರಿ, ವಿಜಯಪುರ ಹಾಗೂ ರಾಯಚೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕೃಷಿ ಪ್ರದೇಶಗಳಲ್ಲೂ ಮಂಜಿನ ಪ್ರಭಾವ ಕಂಡುಬಂದಿದ್ದು, ತರಕಾರಿ ಹಾಗೂ ಹೂ ಬೆಳೆಗಳಿಗೆ ಹಾನಿಯ ಭೀತಿ ಎದುರಾಗಿದೆ.
ಇತ್ತ ರಾಜಧಾನಿ ಬೆಂಗಳೂರಿನಲ್ಲೂ ಕನಿಷ್ಠ ತಾಪಮಾನ 14 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆಯಾಗಿದ್ದು, ಬೆಳಗ್ಗೆ ಹಾಗೂ ರಾತ್ರಿ ಸಮಯದಲ್ಲಿ ಚಳಿ ಹೆಚ್ಚಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಬೆಂಗಳೂರನ್ನು ಕಾಶ್ಮೀರಕ್ಕೆ ಹೋಲಿಕೆ ಮಾಡಲಾಗುತ್ತಿದ್ದು, ತೀವ್ರ ಚಳಿಯಿಂದ ಜನ ಮನೆಯಿಂದ ಹೊರ ಬರಲು ಹಿಂದುಮುಂದು ನೋಡುತ್ತಿದ್ದಾರೆ. ತಜ್ಞರ ಪ್ರಕಾರ ಈ ಚಳಿ ಡಿಸೆಂಬರ್ ಅಂತ್ಯ ಮತ್ತು ಜನವರಿ ಆರಂಭದವರೆಗೆ ಮುಂದುವರೆಯುವ ಸಾಧ್ಯತೆ ಇದ್ದು, ವೃದ್ಧರು ಮತ್ತು ಮಕ್ಕಳು ಹೆಚ್ಚುವರಿ ಎಚ್ಚರಿಕೆ ವಹಿಸುವಂತೆ ಸಲಹೆ ನೀಡಲಾಗಿದೆ.

