ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬೆಂಗಳೂರಿನ ಮೆಟ್ರೋ ಹಳದಿ ಮಾರ್ಗಕ್ಕೆ ಅಧಿಕೃತ ಚಾಲನೆ ನೀಡಿದರು. ಈ ವಿಶೇಷ ಸಂದರ್ಭಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಜೊತೆ ಇದ್ದರು. ಡಿಕೆಶಿ ಅವರು ಯೋಜನೆಯ ತಾಂತ್ರಿಕ ವಿವರಗಳು, ನಿರ್ಮಾಣದ ಸವಾಲುಗಳು ಹಾಗೂ ಸಾರ್ವಜನಿಕರಿಗೆ ಸಿಗಲಿರುವ ಪ್ರಯೋಜನಗಳ ಬಗ್ಗೆ ಪ್ರಧಾನಿಗೆ ಸಂಪೂರ್ಣ ಮಾಹಿತಿ ನೀಡಿದರು.
ಹಳದಿ ಮಾರ್ಗವು ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರವರೆಗೆ 19.15 ಕಿ.ಮೀ. ಉದ್ದದ ಎಲಿವೇಟೆಡ್ ಮಾರ್ಗವಾಗಿದ್ದು, 16 ನಿಲ್ದಾಣಗಳನ್ನು ಒಳಗೊಂಡಿದೆ. 5,056.99 ಕೋಟಿ ವೆಚ್ಚದಲ್ಲಿ ನಿರ್ಮಿತವಾದ ಈ ಮಾರ್ಗವು ಎಲೆಕ್ಟ್ರಾನಿಕ್ ಸಿಟಿಯಂತಹ ಪ್ರಮುಖ ಐಟಿ ಹಬ್‌ಗಳನ್ನು ನಗರದ ಕೇಂದ್ರ ಭಾಗದೊಂದಿಗೆ ಸಂಪರ್ಕಿಸುತ್ತದೆ. ಹೊಸೂರು ರಸ್ತೆ, ಸಿಲ್ಕ್ ಬೋರ್ಡ್ ಹಾಗೂ ಇತರ ಜನನಿಬಿಡ ಪ್ರದೇಶಗಳ ಸಂಚಾರ ದಟ್ಟಣೆ ಕಡಿಮೆ ಮಾಡುವ ಗುರಿಯಿದೆ.
ಉದ್ಘಾಟನೆಯ ನಂತರ ಪ್ರಧಾನಿ ಮೋದಿ, ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆಶಿವಕುಮಾರ್ ಅವರೊಂದಿಗೆ ಹಳದಿ ಮಾರ್ಗದಲ್ಲಿ ಆರ್.ವಿ. ರಸ್ತೆಯಿಂದ ಎಲೆಕ್ಟ್ರಾನಿಕ್ ಸಿಟಿಯವರೆಗೆ ಮೆಟ್ರೋ ಪ್ರಯಾಣಿಸಿದರು. ಈ ಪ್ರಯಾಣದ ವೇಳೆ ಪ್ರಧಾನಿ ಮಾಡಿದ ಹಾಸ್ಯಪ್ರಚುರ ಮಾತಿಗೆ ಸಿಎಂ ಮತ್ತು ಡಿಕೆಶಿ ನಕ್ಕು ಪ್ರತಿಕ್ರಿಯಿಸಿದರು.
ಹಳದಿ ಮಾರ್ಗವು ಆಗಸ್ಟ್ 11ರಿಂದ ಸಾರ್ವಜನಿಕರಿಗೆ ತೆರೆದುಕೊಳ್ಳಲಿದೆ. ಆರಂಭದಲ್ಲಿ ಮೂರು ರೈಲುಗಳು 25 ನಿಮಿಷಗಳ ಅಂತರದಲ್ಲಿ ಸಂಚರಿಸಲಿದ್ದು, 2026ರ ವೇಳೆಗೆ 41 ರೈಲುಗಳೊಂದಿಗೆ ಪ್ರತಿ 2 ನಿಮಿಷಕ್ಕೊಮ್ಮೆ ಸೇವೆ ಒದಗಿಸುವ ಯೋಜನೆ ಇದೆ.
ಹಳದಿ ಮಾರ್ಗ ಉದ್ಘಾಟನೆಯು ಬೆಂಗಳೂರಿನ ಸಾರಿಗೆ ವ್ಯವಸ್ಥೆಗೆ ಹೊಸ ಜೀವ ತುಂಬಲಿದೆ. ಇದು ಐಟಿ ಉದ್ಯೋಗಿಗಳು ಹಾಗೂ ದಿನನಿತ್ಯ ಪ್ರಯಾಣಿಕರಿಗೆ ವೇಗವಾದ ಮತ್ತು ಸುಗಮ ಸಾರಿಗೆಯನ್ನು ಒದಗಿಸುವುದರೊಂದಿಗೆ, ನಗರದಲ್ಲಿ ದಟ್ಟಣೆ ತಗ್ಗಿಸಲು ಮಹತ್ವದ ಪಾತ್ರ ವಹಿಸಲಿದೆ. ಈ ಯೋಜನೆ ಕೇಂದ್ರ-ರಾಜ್ಯ ಸಹಕಾರದ ಯಶಸ್ವಿ ಮಾದರಿಯಾಗಿದೆ.