Wednesday, November 5, 2025

ಬೆಂಗಳೂರು ಪಾಲಿಕೆ ಚುನಾವಣೆ: ಅಂತಿಮ ಪ್ರಕಟಣೆಗೆ ಗಡುವು ವಿಸ್ತರಿಸಿದ ‘ಸುಪ್ರೀಂ’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಬರುವ ಐದು ಪಾಲಿಕೆಗಳ ಕ್ಷೇತ್ರ ಪುನರ್ ವಿಂಗಡಣೆಯ ಅಂತಿಮ ಅಧಿಸೂಚನೆಯನ್ನು ಪ್ರಕಟಿಸಲು ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನವೆಂಬರ್ 15 ರವರೆಗೆ ಸಮಯಾವಕಾಶ ನೀಡಿದೆ.

ಕಾಂಗ್ರೆಸ್ ಮುಖಂಡ ಎಂ. ಶಿವರಾಜು ಮತ್ತು ಇತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಸೂರ್ಯಕಾಂತ್, ಉಜ್ಜಲ್ ಭುಯಾನ್ ಮತ್ತು ಜೋಯ್‌ಮಲ್ಯ ಬಾಗ್ಚಿ ನೇತೃತ್ವದ ತ್ರಿಸದಸ್ಯ ಪೀಠವು ಈ ನಿರ್ಧಾರ ಪ್ರಕಟಿಸಿದೆ.

ರಾಜ್ಯ ಸರ್ಕಾರದ ಸಮರ್ಥನೆ

ರಾಜ್ಯ ಸರ್ಕಾರದ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಮತ್ತು ಅಡ್ವಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ಅವರು, ರಾಜ್ಯದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗಾಗಿ ಅಧಿಕಾರಿಗಳನ್ನು ನೇಮಿಸಿದ ಕಾರಣದಿಂದ ಕ್ಷೇತ್ರ ಪುನರ್ ವಿಂಗಡಣೆ ಪ್ರಕ್ರಿಯೆಯಲ್ಲಿ ವಿಳಂಬವಾಯಿತು ಎಂದು ಪೀಠಕ್ಕೆ ತಿಳಿಸಿದರು.

ಅಲ್ಲದೆ, ಪುನರ್ ವಿಂಗಡಣೆಗೆ ಸಂಬಂಧಿಸಿದ ಎಲ್ಲಾ ಸಿದ್ಧತೆಗಳು ಈಗ ಪೂರ್ಣಗೊಂಡಿದ್ದು, ಈ ಕೆಳಗಿನಂತೆ ಅಂತಿಮ ಅಧಿಸೂಚನೆಗಳನ್ನು ಪ್ರಕಟಿಸುವುದಾಗಿ ಸರ್ಕಾರ ಭರವಸೆ ನೀಡಿತು.

ಕ್ಷೇತ್ರ ಪುನರ್ ವಿಂಗಡಣೆ ಅಂತಿಮ ಅಧಿಸೂಚನೆ: ನವೆಂಬರ್ 15ರೊಳಗೆ.

ವಾರ್ಡ್ ಮೀಸಲಾತಿ ಅಂತಿಮ ಅಧಿಸೂಚನೆ: ಡಿಸೆಂಬರ್ 15ರೊಳಗೆ.

ಚುನಾವಣಾ ಆಯೋಗದ ನಿಲುವು

ರಾಜ್ಯ ಚುನಾವಣಾ ಆಯೋಗದ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಕೆ.ಎನ್ ಫಣೀಂದ್ರ ಅವರು, ಆಯೋಗವು ಜಿಲ್ಲಾ ಮತ್ತು ಹೆಚ್ಚುವರಿ ಚುನಾವಣಾಧಿಕಾರಿಗಳನ್ನು ನೇಮಿಸುವ ಮೂಲಕ ಚುನಾವಣಾ ಪ್ರಕ್ರಿಯೆಯನ್ನು ಆರಂಭಿಸಿದೆ. ಆದರೂ, ಚುನಾವಣೆಯನ್ನು ಸಂಪೂರ್ಣವಾಗಿ ನಡೆಸಲು ಆಯೋಗಕ್ಕೆ ಕನಿಷ್ಠ ಎರಡರಿಂದ ಮೂರು ತಿಂಗಳ ಕಾಲಾವಕಾಶ ಬೇಕಾಗುತ್ತದೆ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟರು.

ಅರ್ಜಿದಾರರ ವಕೀಲರು ದೀರ್ಘಕಾಲದಿಂದ ಬಿಬಿಎಂಪಿಗೆ ಚುನಾವಣೆ ನಡೆಯದಿರುವುದು ಮತ್ತು ಸರ್ಕಾರದ ವಿಳಂಬ ಧೋರಣೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.

ಎಲ್ಲಾ ವಾದಗಳನ್ನು ಆಲಿಸಿದ ನಂತರ, ನ್ಯಾಯಪೀಠವು ರಾಜ್ಯ ಸರ್ಕಾರಕ್ಕೆ ಕ್ಷೇತ್ರ ಪುನರ್ ವಿಂಗಡಣೆಯ ಅಂತಿಮ ಅಧಿಸೂಚನೆಗೆ ನ.15 ರವರೆಗೆ ಮತ್ತು ವಾರ್ಡ್ ಮೀಸಲಾತಿಯ ಅಂತಿಮ ಅಧಿಸೂಚನೆಗೆ ಡಿ.15 ರವರೆಗೆ ಕಾಲಾವಕಾಶ ನೀಡಿ ವಿಚಾರಣೆಯನ್ನು ಮುಂದೂಡಿದೆ.

error: Content is protected !!