ಹೊಸದಿಗಂತ ಡಿಜಿಟಲ್ ಡೆಸ್ಕ್:
ವಯಸ್ಸು ಎನ್ನುವುದು ಕೇವಲ ಸಂಖ್ಯೆ ಮಾತ್ರ ಎಂಬುದನ್ನು ರಾಜಾಜಿನಗರದ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಎಸ್. ಸುರೇಶ್ ಕುಮಾರ್ ಸಾಬೀತುಪಡಿಸಿದ್ದಾರೆ. ಇತ್ತೀಚೆಗಷ್ಟೇ ಗಂಭೀರ ನರವೈಜ್ಞಾನಿಕ ಕಾಯಿಲೆಯಿಂದ ಚೇತರಿಸಿಕೊಂಡಿದ್ದ 70 ವರ್ಷದ ಸುರೇಶ್ ಕುಮಾರ್ ಅವರು, ಬೆಂಗಳೂರಿನಿಂದ ಕನ್ಯಾಕುಮಾರಿಯವರೆಗೆ ಬರೋಬ್ಬರಿ 702 ಕಿಲೋಮೀಟರ್ ಸೈಕಲ್ ಸವಾರಿ ಮಾಡುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ. ಇವರ ಈ ಅದ್ವಿತೀಯ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಈ ಕುರಿತು ‘X’ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, “ಆರೋಗ್ಯದ ಸಮಸ್ಯೆಗಳನ್ನು ಮೆಟ್ಟಿ ನಿಂತು ಸುರೇಶ್ ಕುಮಾರ್ ಅವರು ಮಾಡಿರುವ ಈ ಸಾಧನೆ ಅತ್ಯಂತ ಸ್ಫೂರ್ತಿದಾಯಕವಾಗಿದೆ. ಅವರ ದೃಢ ನಿರ್ಧಾರ ಮತ್ತು ಅಚಲ ಮನೋಭಾವ ಇಡೀ ದೇಶಕ್ಕೆ ಫಿಟ್ನೆಸ್ ಕುರಿತು ಪ್ರಮುಖ ಸಂದೇಶ ನೀಡುತ್ತದೆ” ಎಂದು ಬಣ್ಣಿಸಿದ್ದಾರೆ. ಅಲ್ಲದೆ, ಖುದ್ದಾಗಿ ಸುರೇಶ್ ಕುಮಾರ್ ಅವರಿಗೆ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.
ಪ್ರಧಾನಿ ಕರೆ ಮಾಡಿದ ಬಗ್ಗೆ ಸಂತಸ ಹಂಚಿಕೊಂಡ ಸುರೇಶ್ ಕುಮಾರ್, “ತೀವ್ರ ಅನಾರೋಗ್ಯದ ಬಳಿಕ ನಾನು ಈ ಸಾಹಸ ಮಾಡಿದ್ದನ್ನು ಕೇಳಿ ಪ್ರಧಾನಿಗಳು ಸಂತಸಪಟ್ಟರು. 2025ರಲ್ಲಿ ನಮ್ಮ ತಂಡ ಒಟ್ಟು 8,000 ಕಿ.ಮೀ ಸೈಕ್ಲಿಂಗ್ ಮಾಡಿರುವ ಮಾಹಿತಿ ನೀಡಿದಾಗ ಅವರು ಅಚ್ಚರಿ ವ್ಯಕ್ತಪಡಿಸಿದರು. ಪ್ರಧಾನ ಮಂತ್ರಿಗಳು ನನ್ನ ಬೆನ್ನು ತಟ್ಟಿದ್ದು ನನ್ನ ಸುಕೃತ” ಎಂದು ಭಾವುಕರಾಗಿ ನುಡಿದಿದ್ದಾರೆ.
ಅಪರೂಪದ ನರವೈಜ್ಞಾನಿಕ ಕಾಯಿಲೆಯಿಂದ ಬಳಲಿ ತಿಂಗಳುಗಟ್ಟಲೆ ವಿಶ್ರಾಂತಿಯಲ್ಲಿದ್ದರೂ, ತಮ್ಮ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯದ ಮೇಲೆ ನಂಬಿಕೆಯಿಟ್ಟು ಈ ಸವಾಲನ್ನು ಅವರು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.

