ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾನ್ಯ ವೈವಾಹಿಕ ಕಲಹವೊಂದು ಭೀಕರ ಕೊಲೆ ಸಂಚಿನ ರೂಪ ಪಡೆದಿರುವ ಘಟನೆ ಬಿಹಾರದ ಸುಪೌಲ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಪತಿಯ ಪ್ರಾಣ ತೆಗೆಯುವ ಉದ್ದೇಶದಿಂದಲೇ ಪತ್ನಿಯೇ ತನ್ನ ಪ್ರಿಯಕರನಿಗೆ ಸುಪಾರಿ ನೀಡಿ ದಾಳಿ ನಡೆಸಿಸಿದ್ದು ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಅದೃಷ್ಟವಶಾತ್ ಪತಿ ಪ್ರಾಣಾಪಾಯದಿಂದ ಪಾರಾಗಿದ್ದು, ಈ ಘಟನೆಯಿಂದ ಸಾಕಷ್ಟು ಅಚ್ಚರಿ ಮೂಡಿಸಿದೆ.
ನವೆಂಬರ್ 26ರಂದು ತ್ರಿವೇಣಿಗಂಜ್ ಮಾರುಕಟ್ಟೆ ಪ್ರದೇಶದಲ್ಲಿ ಊಟ ಮುಗಿಸಿ ಮನೆಗೆ ತೆರಳುತ್ತಿದ್ದ ಶಶಿರಂಜನ್ ಚೌಧರಿ ಎಂಬುವರ ಮೇಲೆ ಅಪರಿಚಿತರು ಗುಂಡು ಹಾರಿಸಿದ್ದರು. ಗಂಭೀರವಾಗಿ ಗಾಯಗೊಂಡ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಸ್ತುತ ಅವರ ಆರೋಗ್ಯ ಸ್ಥಿರವಾಗಿದೆ. ಘಟನೆಯ ಬಳಿಕ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಆರಂಭಿಸಿದ್ದರು.
ತನಿಖೆಯ ವೇಳೆ ಈ ದಾಳಿಯ ಹಿಂದೆ ಚೌಧರಿಯ ಪತ್ನಿ ಸೋನಿ ಮತ್ತು ಅವಳ ಬಾಲ್ಯದ ಗೆಳೆಯ ಹಾಗೂ ಪ್ರಿಯಕರ ಬ್ರಜೇಶ್ ಇದ್ದಾರೆ ಎಂಬುದು ಬಯಲಾಗಿದೆ. ಪತಿಯನ್ನು ಕೊಲ್ಲಿಸಲು ಈ ಇಬ್ಬರು ಸೇರಿ 1.5 ಲಕ್ಷ ರೂಪಾಯಿ ನೀಡಿ ಹಂತಕರನ್ನು ನೇಮಿಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ದಾಳಿ ವಿಫಲವಾದುದರಿಂದ ಕೊಲೆ ಯತ್ನ ಮಾತ್ರ ದಾಖಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದು, 62 ಸಾವಿರ ರೂಪಾಯಿ ನಗದು ಹಾಗೂ ಅಪರಾಧದಲ್ಲಿ ಬಳಸಿದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

