ಹೊಸದಿಗಂತ ಡಿಜಿಟಲ್ ಡೆಸ್ಕ್:
ಉದ್ಯಾನ ನಗರಿ ಬೆಂಗಳೂರಿನಲ್ಲಿ ವಾಯು ಮಾಲಿನ್ಯದ ಪ್ರಮಾಣ ದಿನೇ ದಿನೇ ಆತಂಕಕಾರಿ ಮಟ್ಟವನ್ನು ತಲುಪುತ್ತಿದೆ. ಇಂದು ನಗರದ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ 161 ದಾಖಲಾಗಿದ್ದು, ಇದು ಆರೋಗ್ಯದ ದೃಷ್ಟಿಯಿಂದ ‘ಕಳಪೆ’ ಎಂದು ಪರಿಗಣಿಸಲಾಗಿದೆ. ಕಳೆದ ಕೆಲವು ದಿನಗಳಿಗೆ ಹೋಲಿಸಿದರೆ ಅಲ್ಪ ಸುಧಾರಣೆ ಕಂಡುಬಂದರೂ, ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡಗಳ ಪ್ರಕಾರ ಇದು ಅತ್ಯಂತ ಅಪಾಯಕಾರಿ ಮಟ್ಟದಲ್ಲಿದೆ.
ನಗರದಲ್ಲಿ ಇಂದು PM2.5 ಪ್ರಮಾಣ 70 ಮತ್ತು PM10 ಪ್ರಮಾಣ 95 ರಷ್ಟಿದೆ. ಈ ಕಣಗಳು ಮಾನವನ ಕೂದಲಿನ ಎಳೆಗಿಂತಲೂ ನೂರಾರು ಪಟ್ಟು ಸೂಕ್ಷ್ಮವಾಗಿದ್ದು, ಉಸಿರಾಟದ ಮೂಲಕ ನೇರವಾಗಿ ಶ್ವಾಸಕೋಶವನ್ನು ಪ್ರವೇಶಿಸಿ ರಕ್ತಕ್ಕೆ ಸೇರುತ್ತವೆ. ಇದು ಕೇವಲ ಅಸ್ತಮಾ ಮಾತ್ರವಲ್ಲದೆ, ಶ್ವಾಸಕೋಶದ ಕ್ಯಾನ್ಸರ್ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಗೆ ನೇರ ಹಾದಿ ಮಾಡಿಕೊಡುತ್ತಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ನಗರದಲ್ಲಿ ಸಂಚರಿಸುವ ಸುಮಾರು 1.2 ಕೋಟಿಗೂ ಅಧಿಕ ವಾಹನಗಳು ಹೊರಸೂಸುವ ದಟ್ಟವಾದ ಹೊಗೆ ಈ ಮಾಲಿನ್ಯಕ್ಕೆ ಪ್ರಮುಖ ಕಾರಣವಾಗಿದೆ. WHO ನಿಗದಿಪಡಿಸಿರುವ ಮಿತಿಗಿಂತ ಐದು ಪಟ್ಟು ಹೆಚ್ಚು ಸೂಕ್ಷ್ಮ ಕಣಗಳು ಗಾಳಿಯಲ್ಲಿರುವುದು ನಾಗರಿಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. 150ರ ಗಡಿ ದಾಟಿದ AQI ಆರೋಗ್ಯವಂತ ವ್ಯಕ್ತಿಗಳ ಮೇಲೂ ದುಷ್ಪರಿಣಾಮ ಬೀರಬಲ್ಲದು ಎಂದು ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.

