Tuesday, November 4, 2025

‘ಭಾಯಿಜಾನ್’ ಟೆರರಿಸ್ಟ್ ಅಲ್ಲ: ಬಲೂಚಿಸ್ತಾನ್ ವಿವಾದಕ್ಕೆ ಪಾಕ್‌ನಿಂದಲೇ ಕ್ಲಿಯರೆನ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಳೆದ ಕೆಲವು ದಿನಗಳಿಂದ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಅಭಿಮಾನಿಗಳಿಗೆ ಆತಂಕ ಮೂಡಿಸಿದ್ದ ಒಂದು ವದಂತಿಗೆ ತೆರೆ ಬಿದ್ದಿದೆ. ಬಲೂಚಿಸ್ತಾನ ಸರ್ಕಾರವು ಸಲ್ಮಾನ್ ಖಾನ್ ಅವರನ್ನು ಭಯೋತ್ಪಾದಕರ ಪಟ್ಟಿಗೆ ಸೇರಿಸಿದೆ ಎಂಬ ಸುದ್ಧಿ ಹಬ್ಬಿತ್ತು. ಆದರೆ, ಈ ಬಗ್ಗೆ ಪಾಕಿಸ್ತಾನ ಸರ್ಕಾರದಿಂದಲೇ ಅಧಿಕೃತ ಸ್ಪಷ್ಟನೆ ಸಿಕ್ಕಿದ್ದು, ಈ ವದಂತಿ ಸಂಪೂರ್ಣ ಸುಳ್ಳು ಎಂದು ಘೋಷಿಸಲಾಗಿದೆ.

ವದಂತಿಗೆ ಕಾರಣವೇನು?

ದುಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಲ್ಮಾನ್ ಖಾನ್ ಅವರು ಬಲೂಚಿಸ್ತಾನವನ್ನು ಪ್ರತ್ಯೇಕ ರಾಷ್ಟ್ರ ಎಂಬ ಅರ್ಥದಲ್ಲಿ ಮಾತನಾಡಿದ್ದರು. ಬಲೂಚಿಸ್ತಾನವು ಪಾಕಿಸ್ತಾನದ ಒಂದು ಭಾಗವಾಗಿದ್ದರೂ, ಅಲ್ಲಿ ಪ್ರತ್ಯೇಕತೆಯ ಕೂಗು ಇದೆ. ಈ ಸೂಕ್ಷ್ಮ ಸಮಯದಲ್ಲಿ ಸಲ್ಮಾನ್ ಖಾನ್ ಅವರ ಹೇಳಿಕೆ ಪಾಕಿಸ್ತಾನದಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ, ಪಾಕಿಸ್ತಾನವು ಅವರನ್ನು ಭಯೋತ್ಪಾದಕರ ಪಟ್ಟಿಗೆ ಸೇರಿಸಿದೆ ಎಂಬ ಆತಂಕಕಾರಿ ವದಂತಿ ಭಾರತೀಯ ಮಾಧ್ಯಮಗಳಲ್ಲಿ ಹರಡಿತ್ತು.

ಪಾಕ್‌ನಿಂದ ಅಧಿಕೃತ ಸ್ಪಷ್ಟನೆ

ಈ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿರುವ ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಫ್ಯಾಕ್ಟ್ ಚೆಕ್ ವಿಭಾಗವು ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದೆ. “ಸಲ್ಮಾನ್ ಖಾನ್ ಅವರನ್ನು ಪಾಕಿಸ್ತಾನ ಸರ್ಕಾರದ ಯಾವುದೇ ದಾಖಲೆಯಲ್ಲೂ ಭಯೋತ್ಪಾದಕ ಎಂದು ಸೇರಿಸಿದ್ದು ಕಂಡುಬಂದಿಲ್ಲ. ಕೇವಲ ಭಾರತದ ಮಾಧ್ಯಮಗಳಲ್ಲಿ ವದಂತಿ ಹರಡಿದ್ದು, ಇದು ವೈಭವೀಕರಿಸಿದ ಸುದ್ಧಿಯೇ ಹೊರತು ನಿಜವಲ್ಲ” ಎಂದು ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.

ಪಾಕಿಸ್ತಾನದಲ್ಲಿಯೂ ಸಲ್ಮಾನ್ ಖಾನ್ ಅವರಿಗೆ ದೊಡ್ಡ ಅಭಿಮಾನಿ ಬಳಗವಿದೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ರಾಜಕೀಯ ಪರಿಸ್ಥಿತಿ ಬಿಗಿಯಾಗುವ ಮೊದಲು, ಅವರ ಸಿನಿಮಾಗಳು ಅಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದ್ದವು. ಹೀಗಾಗಿ, ಈ ಫೇಕ್ ನ್ಯೂಸ್ ಕೇಳಿ ಬೇಸರಗೊಂಡಿದ್ದ ಅಭಿಮಾನಿಗಳು, ಈಗ ಪಾಕ್‌ನ ಸ್ಪಷ್ಟನೆಯ ನಂತರ ನಿಟ್ಟುಸಿರು ಬಿಟ್ಟಿದ್ದಾರೆ.

ಸದ್ಯ ಸಲ್ಮಾನ್ ಖಾನ್ ಅವರು ತಮ್ಮ ಸಿನಿಮಾಗಳ ಶೂಟಿಂಗ್ ಮತ್ತು ‘ಬಿಗ್ ಬಾಸ್’ ನಿರೂಪಣೆಯಲ್ಲಿ ಬಿಝಿಯಾಗಿದ್ದಾರೆ. ಈ ಇಡೀ ಘಟನೆಯ ಬಗ್ಗೆ ಅವರು ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

error: Content is protected !!