ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಕರ ಸಂಕ್ರಾಂತಿಯ ಪುಣ್ಯಕಾಲದಂದು ಬೆಂಗಳೂರಿನ ಐತಿಹಾಸಿಕ ತಾಣ ಬಸವನಗುಡಿಯ ಗವಿಗಂಗಾಧರೇಶ್ವರ ದೇವಾಲಯದಲ್ಲಿ ಅಪರೂಪದ ಪ್ರಕೃತಿ ವಿಸ್ಮಯ ಜರುಗಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಸೂರ್ಯನ ಕಿರಣಗಳು ಗರ್ಭಗುಡಿಯನ್ನು ಪ್ರವೇಶಿಸಿ ಶಿವಲಿಂಗವನ್ನು ಸ್ಪರ್ಶಿಸಿದ್ದು, ಸಾವಿರಾರು ಭಕ್ತರು ಈ ಭವ್ಯ ದೃಶ್ಯಕ್ಕೆ ಸಾಕ್ಷಿಯಾದರು.
ಪೂರ್ವ ನಿಗದಿತ ಲೆಕ್ಕಾಚಾರದಂತೆ ಸಂಜೆ 5:02ಕ್ಕೆ ಸೂರ್ಯ ರಶ್ಮಿ ಶಿವಲಿಂಗವನ್ನು ಸ್ಪರ್ಶಿಸಬೇಕಿತ್ತು. ಆದರೆ, ಪ್ರಕೃತಿಯ ಈ ಪಥ ಬದಲಾವಣೆಯಲ್ಲಿ ತುಸು ವಿಳಂಬವಾಗಿ ಸಂಜೆ 5:17ಕ್ಕೆ ಭಾಸ್ಕರನ ಕಿರಣಗಳು ಶಿವಲಿಂಗಕ್ಕೆ ಸ್ಪರ್ಶಿಸಿದವು. ಸುಮಾರು 4 ನಿಮಿಷಗಳ ಕಾಲ (5:21ರವರೆಗೆ) ಈ ಸೂರ್ಯಾಭಿಷೇಕದ ಸಂಭ್ರಮ ಮುಂದುವರಿಯಿತು.

ಸೂರ್ಯನ ಕಿರಣಗಳು ಮೊದಲು ದೇಗುಲದ ಹಂಸ ದ್ವಾರದ ಮೂಲಕ ಪ್ರವೇಶಿಸಿ, ನಂದಿಯ ವಿಗ್ರಹವನ್ನು ತಲುಪಿದವು. ನಂತರ ನಂದಿಯ ಎರಡು ಕೊಂಬುಗಳ ಮಧ್ಯಭಾಗದಿಂದ ಹಾದುಹೋಗಿ, ಗರ್ಭಗುಡಿಯ ಮುಂಭಾಗದಲ್ಲಿರುವ ಸ್ಪಟಿಕ ಲಿಂಗವನ್ನು ಪ್ರವೇಶಿಸಿದವು. ಕೊನೆಯದಾಗಿ ಈ ಕಿರಣಗಳು ಶಿವಲಿಂಗದ ಪೀಠವನ್ನು ಸ್ಪರ್ಶಿಸಿ, ಬಳಿಕ ಲಿಂಗದ ಮೇಲೆ ಪೂರ್ಣ ಪ್ರಮಾಣದಲ್ಲಿ ಬೆಳಗಿದವು. ಈ ಅಪರೂಪದ ವಿದ್ಯಮಾನವು ಸೂರ್ಯನು ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಪಥ ಬದಲಿಸುವುದರ ಸಂಕೇತವಾಗಿ ಕಂಡುಬಂದಿತು.
ಸೂರ್ಯ ರಶ್ಮಿ ಗರ್ಭಗುಡಿ ಪ್ರವೇಶಿಸುತ್ತಿದ್ದಂತೆಯೇ ಪ್ರಧಾನ ಅರ್ಚಕ ಸೋಮಸುಂದರ ದೀಕ್ಷಿತ್ ಅವರ ನೇತೃತ್ವದಲ್ಲಿ ಗಂಗಾಧರನಿಗೆ ಪೂರ್ಣಕುಂಭ ಅಭಿಷೇಕ ಹಾಗೂ ವಿಶೇಷ ದೀಪಾರಾಧನೆ ನೆರವೇರಿಸಲಾಯಿತು.
ದೇವಸ್ಥಾನದ ಒಳಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧವಿದ್ದ ಕಾರಣ, ಭಕ್ತರಿಗಾಗಿ ದೇವಸ್ಥಾನದ ಆವರಣದಲ್ಲಿ ದೊಡ್ಡ ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗಿತ್ತು. ಶಾಮಿಯಾನ ಮತ್ತು ಟೆಂಟ್ ವ್ಯವಸ್ಥೆ ಮಾಡುವ ಮೂಲಕ ಭಕ್ತರು ನೆರಳಿನಲ್ಲಿ ಕುಳಿತು ಈ ಅದ್ಭುತ ಕ್ಷಣವನ್ನು ಕಣ್ತುಂಬಿಕೊಳ್ಳಲು ಅವಕಾಶ ಮಾಡಿಕೊಡಲಾಗಿತ್ತು.


