Wednesday, October 29, 2025

ಸಂಕಷ್ಟದ ಸುಳಿಯಲ್ಲಿ ಭವಾನಿ ರೇವಣ್ಣ: ಅಪಹರಣ ಕೇಸಿನಿಂದ ಕ್ಲೀನ್‌ ಚಿಟ್‌ ಅರ್ಜಿ ವಜಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೆ.ಆರ್.ನಗರದ ಮಹಿಳೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮನ್ನು ಆರೋಪ ಮುಕ್ತಗೊಳಿಸಬೇಕು ಎಂದು ಕೋರಿ ಭವಾನಿ ರೇವಣ್ಣ ಅವರು ಸಲ್ಲಿಸಿದ್ದ ಅರ್ಜಿಯನ್ನು 42ನೇ ಎಸಿಜೆಎಂ ಕೋರ್ಟ್‌ ವಜಾಗೊಳಿಸಿದೆ. ಈ ಮಹತ್ವದ ತೀರ್ಪು ಭವಾನಿ ರೇವಣ್ಣ ಅವರಿಗೆ ಮತ್ತೊಮ್ಮೆ ಹಿನ್ನಡೆ ತಂದಿದೆ.

ಎ7 ಆರೋಪಿ ಕೆ.ಎ. ರಾಜಗೋಪಾಲ್ ಮತ್ತು ಎ8 ಆರೋಪಿ ಭವಾನಿ ರೇವಣ್ಣ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ನ್ಯಾ.ಕೆ.ಎನ್.ಶಿವಕುಮಾರ್ ಅವರು ಆದೇಶ ಹೊರಡಿಸಿದ್ದಾರೆ.

ಪ್ರಕರಣದ ಹಿನ್ನೆಲೆ

ಈ ಪ್ರಕರಣವು ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋಗಳ ವೈರಲ್‌ನ ನಂತರ ಬೆಳಕಿಗೆ ಬಂದಿತ್ತು. ವೈರಲ್‌ ವಿಡಿಯೋಗಳಲ್ಲಿ ತಮ್ಮ ತಾಯಿಯ ಚಿತ್ರವೂ ಇದೆ, ಮತ್ತು ಅವರು ಕಣ್ಮರೆಯಾಗಿದ್ದಾರೆ ಎಂದು ಸಂತ್ರಸ್ತೆಯ ಪುತ್ರ ಮೇ 2ರ ತಡರಾತ್ರಿ ಮೈಸೂರಿನ ಕೆ.ಆರ್. ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಈ ದೂರಿನ ಆಧಾರದಲ್ಲಿ ಮಾಜಿ ಸಚಿವ ಹೆಚ್.ಡಿ. ರೇವಣ್ಣ, ಅವರ ಪತ್ನಿ ಭವಾನಿ ರೇವಣ್ಣ ಮತ್ತು ಭವಾನಿ ರೇವಣ್ಣ ಅವರ ಸಂಬಂಧಿ ಬಾಬು ವಿರುದ್ಧ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಹೆಚ್.ಡಿ. ರೇವಣ್ಣ, ಭವಾನಿ ಮತ್ತು ಬಾಬು ಅವರನ್ನು ಬಂಧಿಸಿದ್ದರು.

ಬಂಧನದ ಬಳಿಕ ಭವಾನಿ ರೇವಣ್ಣ ಅವರು ಜಾಮೀನು ಕೋರಿ ಕರ್ನಾಟಕ ಹೈಕೋರ್ಟ್‌ ಮೊರೆ ಹೋಗಿದ್ದರು. ಹೈಕೋರ್ಟ್ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ನಂತರ, ಪ್ರಕರಣವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು. ಎಸ್‌ಐಟಿ ಪರ ವಕೀಲರು, ಆರೋಪಿ ಮಹಿಳೆ ಪ್ರಕರಣದಲ್ಲಿ ನೇರವಾಗಿ ಸಂಬಂಧ ಹೊಂದಿದ್ದಾರೆ ಮತ್ತು ಅತ್ಯಾಚಾರ ಆರೋಪಿಯ ತಾಯಿ ಆಗಿದ್ದಾರೆ. ಅಲ್ಲದೆ, ಪ್ರತಿಷ್ಠಿತ ರಾಜಕೀಯ ಕುಟುಂಬಕ್ಕೆ ಸೇರಿದವರಾಗಿರುವುದರಿಂದ ಹೈಕೋರ್ಟ್ ನೀಡಿರುವ ನಿರೀಕ್ಷಣಾ ಜಾಮೀನನ್ನು ರದ್ದುಪಡಿಸಬೇಕು ಎಂದು ವಾದಿಸಿದ್ದರು.

ಆದರೆ, ಸುಪ್ರೀಂ ಕೋರ್ಟ್‌ ಜಾಮೀನು ರದ್ದುಗೊಳಿಸಲು ನಿರಾಕರಿಸಿತ್ತು. ‘ರಾಜಕೀಯ ಕುಟುಂಬ’ ಎಂಬ ಕಾರಣಕ್ಕೆ ಜಾಮೀನು ನಿರಾಕರಿಸಲು ಸಾಧ್ಯವಿಲ್ಲ. ಕೆಲ ರಾಜಕಾರಣಿಗಳು ಅಧಿಕಾರ ದುರ್ಬಳಕೆ ಮಾಡಿಕೊಳ್ಳಬಹುದು. ಈ ಪ್ರಕರಣದಲ್ಲಿ ತನಿಖೆ ದಾರಿ ತಪ್ಪಿದೆಯಾ? ತಪ್ಪಿದ್ದರೆ ನಾವು ನಿಮ್ಮ ನೆರವಿಗೆ ಬರಬಹುದು. ಆದರೆ ಇಲ್ಲಿ ಯಾವುದೂ ಆ ರೀತಿ ಕಾಣುತ್ತಿಲ್ಲ ಎಂದು ಹೇಳಿ ಜಾಮೀನು ರದ್ದು ಅರ್ಜಿಯನ್ನು ವಜಾಗೊಳಿಸಿತ್ತು.

ಇದೀಗ, ಕೆ.ಆರ್. ನಗರ ಕೋರ್ಟ್‌ಗೆ ಸಲ್ಲಿಸಲಾಗಿದ್ದ ಅಪಹರಣ ಪ್ರಕರಣದಿಂದ ಕೈಬಿಡುವಂತೆ ಕೋರಿದ್ದ ಅರ್ಜಿಯೂ ವಜಾಗೊಂಡಿರುವುದು ಭವಾನಿ ರೇವಣ್ಣ ಅವರ ಕಾನೂನು ಹೋರಾಟಕ್ಕೆ ಮತ್ತಷ್ಟು ಸವಾಲುಗಳನ್ನು ತಂದೊಡ್ಡಿದೆ.

error: Content is protected !!