ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗೆ ಕ್ಯಾಪ್ಟನ್ ಎಂಬ ಇನ್ನೊಂದು ಗಂಡಾನೆಯೊಂದಿಗೆ ನಡೆದ ಕಾದಾಟದಲ್ಲಿ ಎಡ ದಂತವನ್ನು ಮುರಿದುಕೊಂಡು ಗಾಯಗೊಂಡಿದ್ದ, ಸ್ಥಳೀಯವಾಗಿ ‘ಭೀಮ’ ಎಂದು ಕರೆಯಲ್ಪಡುವ ಗಂಡು ಕಾಡಾನೆ ಆರೋಗ್ಯಕರವಾಗಿದೆ ಎಂದು ಡಿಎಫ್‌ಓ ಸೌರಭ್ ಕುಮಾರ್ ಅವರು ಮಾಧ್ಯಮ ಹೇಳಿಕೆ ಮತ್ತು ಡ್ರೋನ್ ವಿಡಿಯೋ ಬಿಡುಗಡೆ ಮಾಡುವ ಮೂಲಕ ಸ್ಪಷ್ಟಪಡಿಸಿದ್ದಾರೆ.
ಡ್ರೋನ್ ವಿಡಿಯೋದಲ್ಲಿ ಚೇತರಿಕೆ ಸ್ಪಷ್ಟ
ಅಧಿಕಾರಿಗಳು ಬಿಡುಗಡೆ ಮಾಡಿರುವ ಡ್ರೋನ್ ವಿಡಿಯೋದಲ್ಲಿ ‘ಭೀಮ’ನು ಮೈತುಂಬಾ ಕೆಸರು ಮೆತ್ತಿಕೊಂಡು, ಗಾಯದ ಹೊರತಾಗಿಯೂ ಆರಾಮವಾಗಿ ಓಡಾಡುತ್ತಿರುವುದು ಸೆರೆಯಾಗಿದೆ. ಮೂರು ದಿನಗಳ ಹಿಂದೆ ಈ ಘಟನೆ ಸಂಭವಿಸಿತ್ತು. ಅರಣ್ಯ ಇಲಾಖೆಯ ಸಿಬ್ಬಂದಿ ಕಾಡಾನೆಯನ್ನು ಪರಿಶೀಲಿಸಿದ್ದು, ಆನೆಯು ಸಾಮಾನ್ಯ ಸ್ಥಿತಿಯಲ್ಲಿದೆ. ಅದು ನೀರನ್ನು ಕುಡಿಯುತ್ತಿರುವುದು ಮತ್ತು ಹುಲ್ಲು ಹಾಗೂ ಇತರ ಮೇವನ್ನು ತಿನ್ನುತ್ತಿರುವುದನ್ನು ಗಮನಿಸಲಾಗಿದೆ.
ಭೀಮನು ಕಾಳಗದ ನಂತರ ಬೇಲೂರು ತಾಲ್ಲೂಕಿನ ಬಿಕ್ಕೋಡು ಭಾಗದಿಂದ ಸಕಲೇಶಪುರದ ಉದೇವಾರ ಭಾಗಕ್ಕೆ ಸಂಚರಿಸಿ, ಪುನಃ ಬಿಕ್ಕೋಡು ಪ್ರದೇಶಕ್ಕೆ ಹಿಂತಿರುಗಿದ್ದಾನೆ. ಪ್ರಸ್ತುತ ಈ ಆನೆಯು ಬಿಕ್ಕೋಡು ಸಮೀಪದ ಬಕ್ರವಳ್ಳಿ ಮತ್ತು ಕಿತ್ತಗೆರೆ ಪ್ರದೇಶದಲ್ಲಿ ಓಡಾಡುತ್ತಿದೆ ಎಂದು ಡಿಎಫ್‌ಓ ತಿಳಿಸಿದ್ದಾರೆ.
ಸುಳ್ಳು ಸುದ್ದಿಗಳಿಗೆ ಎಚ್ಚರಿಕೆ ಮತ್ತು ಸಾರ್ವಜನಿಕರಿಗೆ ಸೂಚನೆ
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ‘ಭೀಮ’ನ ಆರೋಗ್ಯದ ಬಗ್ಗೆ ಹಲವು ತಪ್ಪು ಸಂದೇಶಗಳು ಹರಿದಾಡುತ್ತಿದ್ದು, ಸಾರ್ವಜನಿಕರು ಇಂತಹ ಯಾವುದೇ ಅನಧಿಕೃತ ಮಾಹಿತಿಗಳನ್ನು ನಂಬಬಾರದು ಎಂದು ಡಿಎಫ್‌ಓ ಸೌರಭ್ ಕುಮಾರ್ ಮನವಿ ಮಾಡಿದ್ದಾರೆ.
ಇದರ ಜೊತೆಗೆ, ಅರಣ್ಯ ಇಲಾಖೆಯ ಅನುಮತಿ ಪಡೆಯದೆ ವನ್ಯಜೀವಿಗಳ ಬಳಿ ತೆರಳುವುದು, ಛಾಯಾಚಿತ್ರ ಮತ್ತು ವೀಡಿಯೊಗಳನ್ನು ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದು ಕಾನೂನುಬಾಹಿರ ಮತ್ತು ಶಿಕ್ಷಾರ್ಹ ಅಪರಾಧ ಎಂದು ಇಲಾಖೆಯು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.

