January22, 2026
Thursday, January 22, 2026
spot_img

ಬೀದರ್ | ರೈತರ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಕೃಷಿ ಕಚೇರಿಗೆ ಮುತ್ತಿಗೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ಸಂಭವಿಸಿರುವ ನೆರೆ, ಬರ, ಪ್ರವಾಹ ಮೊದಲಾದ ಪ್ರಕೃತಿ ವಿಕೋಪಗಳಿಂದ ರೈತರು, ಹಾಲು ಉತ್ಪಾದಕರು ಹಾಗೂ ಕೃಷಿ ಕಾರ್ಮಿಕರು ಭಾರೀ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಗಳಿಗೆ ವಿರೋಧ ವ್ಯಕ್ತಪಡಿಸಿ ಇಂದು ಬಿಜೆಪಿ ರೈತ ಮೋರ್ಚಾ ವತಿಯಿಂದ ತಾಲ್ಲೂಕು ಕೃಷಿ ಅಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಪ್ರತಿಭಟನಾಕಾರರು, ಸರ್ಕಾರ ಘೋಷಣೆ ಮಾಡಿರುವ ಪರಿಹಾರ ಧನವನ್ನು ರೈತರ ಖಾತೆಗೆ ತಕ್ಷಣವೇ ಜಮಾ ಮಾಡಬೇಕೆಂದು ಆಗ್ರಹಿಸಿದರು. ಹಾಲು ಉತ್ಪಾದಕರಿಗೆ ಪ್ರತಿ ಲಿಟರ್‌ಗೆ ೫ ರೂ. ಪ್ರೋತ್ಸಾಹ ಧನದ ಬಾಕಿ ಇರುವ ೬೨೦ ಕೋಟಿ ರೂ. ಅನ್ನು ತಕ್ಷಣ ಬಿಡುಗಡೆ ಮಾಡಬೇಕು ಹಾಗೂ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಹೇಳಿರುವಂತೆ ಈ ಪ್ರೋತ್ಸಾಹ ಧನವನ್ನು ೭ ರೂ.ಗೆ ಹೆಚ್ಚಿಸಬೇಕೆಂದು ಒತ್ತಾಯಿಸಿದರು.

ಇದೇ ವೇಳೆ ಕಬ್ಬು ಬೆಳೆಗಾರರಿಗೆ ಪ್ರತಿ ಟನ್‌ಗೆ ರೂ. ೩,೩೦೦ ದರವನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸಮಾನವಾಗಿ ಜಾರಿಗೆ ತರಬೇಕು ಎಂದು ಆಗ್ರಹಿಸಿದರು. ಜೊತೆಗೆ, ಹಿಂದಿನಂತೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಭಾಗವಾಗಿ ರಾಜ್ಯ ಸರ್ಕಾರದಿಂದ ಪ್ರತಿ ರೈತನಿಗೆ ವರ್ಷಕ್ಕೆ ರೂ. ೪,೦೦೦ ನೆರವು ಪುನಃ ಜಾರಿಗೆ ತರಬೇಕು ಎಂದು ಮನವಿ ಸಲ್ಲಿಸಲಾಯಿತು.

ಬಿ.ಎಸ್. ಯಡಿಯೂರಪ್ಪ ಅವರ ಆಡಳಿತಾವಧಿಯಲ್ಲಿ ಜಾರಿಯಲ್ಲಿದ್ದ ರೂ. ೨೫,೦೦೦ ಶುಲ್ಕದಲ್ಲಿ ಟ್ರಾನ್ಸ್ಫಾರ್ಮರ್ ಹಾಗೂ ಶಾಶ್ವತ ವಿದ್ಯುತ್ ಸಂಪರ್ಕ ಒದಗಿಸುವ ಯೋಜನೆಯನ್ನು ತಕ್ಷಣ ಪುನಃ ಆರಂಭಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ರೈತರಿಗೆ ಸಹಕಾರಿ ಬ್ಯಾಂಕ್‌ಗಳ ಮೂಲಕ ಶೂನ್ಯ ಬಡ್ಡಿದರದಲ್ಲಿ ಗರಿಷ್ಠ ರೂ. ೧೦ ಲಕ್ಷವರೆಗೆ ಸಾಲ ಸೌಲಭ್ಯ ನೀಡಬೇಕು. ಕೃಷಿ ಯಂತ್ರೋಪಕರಣಗಳಿಗೆ ಹೆಚ್ಚಿನ ಸಬ್ಸಿಡಿ ನೀಡುವ ವ್ಯವಸ್ಥೆ ಜಾರಿಗೊಳಿಸಬೇಕು

ಈ ಕುರಿತು ರಾಜ್ಯ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳುವಂತೆ ಕೃಷಿ ಅಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಈ ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಸೋಮನಾಥ್ ಪಾಟೀಲ್ , ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ, ಮಾಜಿ ಕೇಂದ್ರ ಸಚಿವರಾದ ಭಗವಂತ್ ಖೂಬಾ, ಈಶ್ವರ್ ಸಿಂಗ್ ಠಾಕೂರ್, ದಕ್ಸಿಣ ಮಂಡಲ್ ಅಧ್ಯಕ್ಷರಾದ ಗುರುನಾಥ್ ರಾಜಗಿರ, ಗ್ರಾಮಾಂತರ ಅಧ್ಯಕ್ಷರಾದ ದೀಪಕ ಗಾದಗೆ, ನಗರ ಅಧ್ಯಕ್ಷರಾದ ಶಶಿಧರ ಹೊಸಳ್ಳಿ, ಮುಖಂಡರಾದ ಗುರುನಾಥ್ ಜಾಂತಿಕರ್, ರಾಜಶೇಖರ್ ನಾಗಮೂರ್ತಿ, ಅಶೋಕ ಹೊಕ್ರಣೆ, ಬಾಬುರಾವ್ ಕಾರ್ ಬಾರಿ, ಬಸವರಾಜ್ ಪವಾರ್, ಮಹಿಳಾ ರಾಜ್ಯ ಕಾರ್ಯದರ್ಶಿಗಳಾದ ಹೇಮಾ ತುಕಾ ರೆಡ್ಡಿ, ವೀರು ದಿಗ್ವಾಲ್ , ಸುನಿಲ್ ಗೌಳಿ , ಗಣೇಶ ಬೋಸ್ಲೆ, ಚಂದ್ರಯ್ಯ ಸ್ವಾಮಿ, ನರೇಶ್ ಗೌಳಿ, ರೋಷನ್ ವರ್ಮಾ,ವೀರೇಶ್ ಸ್ವಾಮಿ,ಸುಭಾಷ್ ಮಡಿವಾಳ ಮಹಾನದಾ ಪಾಟೀಲ್, ಗುಂಡಮ್ಮ, ಮಾಯಾವತಿ ಕೋಟೆ, ಜಗನ್ನಾಥ್ ಪಾಟೀಲ್ ಸಿರಿಕಟ್ನಳ್ಳಿ, ರೈತ ಮೋರ್ಚಾ ಅಧ್ಯಕ್ಷರು ಹಾಗೂ ರೈತರು ಉಪಸ್ಥಿತರಿದ್ದರು.

Must Read