ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದಲ್ಲಿ ಅಕ್ರಮ ವಲಸೆ ಹಾಗೂ ಭದ್ರತಾ ಆತಂಕ ಹೆಚ್ಚುತ್ತಿರುವ ಹಿನ್ನೆಲೆ, ವಿದೇಶೀಯರ ಪ್ರವೇಶಕ್ಕೆ ಸಂಬಂಧಿಸಿದಂತೆ ಟ್ರಂಪ್ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಸಾಮಾಜಿಕ ಹಾಗೂ ಕಾನೂನು ಸಮಸ್ಯೆಗಳಿಗೆ ಕಾರಣವಾಗಬಹುದಾದ ವಲಸೆಯನ್ನು ನಿಯಂತ್ರಿಸುವ ಉದ್ದೇಶದಿಂದ, ಒಟ್ಟು 75 ದೇಶಗಳ ನಾಗರಿಕರಿಗೆ ವಲಸೆ ವೀಸಾ ನೀಡುವ ಪ್ರಕ್ರಿಯೆಯನ್ನು ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸಲಾಗಿದೆ.
ಈ ನಿರ್ಬಂಧವು ಇಮ್ಮಿಗ್ರೇಶನ್ ವೀಸಾಗಳಿಗೆ ಮಾತ್ರ ಅನ್ವಯವಾಗುತ್ತದೆ. ಅಂದರೆ, ಅಮೆರಿಕದಲ್ಲಿ ಶಾಶ್ವತವಾಗಿ ನೆಲೆಸಲು ಅರ್ಜಿ ಸಲ್ಲಿಸಿರುವವರ ವೀಸಾ ಪ್ರಕ್ರಿಯೆ ಮುಂದುವರಿಯುವುದಿಲ್ಲ. ಆದರೆ ಪ್ರವಾಸ, ವ್ಯಾಪಾರ ಅಥವಾ ತಾತ್ಕಾಲಿಕ ಉದ್ದೇಶಕ್ಕಾಗಿ ಬರುವವರಿಗೆ ಈ ತಡೆ ಅನ್ವಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ವೀಸಾ ಫ್ರೀಜ್‌ಗೆ ಒಳಪಟ್ಟಿರುವ ದೇಶಗಳ ಪಟ್ಟಿಯಲ್ಲಿ ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ್, ಇರಾನ್, ಇರಾಕ್, ರಷ್ಯಾ, ನೈಜೀರಿಯಾ, ಈಜಿಪ್ಟ್ ಸೇರಿದಂತೆ ಏಷ್ಯಾ, ಆಫ್ರಿಕಾ, ಯುರೋಪ್ ಹಾಗೂ ಲ್ಯಾಟಿನ್ ಅಮೆರಿಕದ ಹಲವು ರಾಷ್ಟ್ರಗಳು ಸೇರಿವೆ. ವಿಶೇಷವೆಂದರೆ, ಪಾಕಿಸ್ತಾನ–ಅಮೆರಿಕ ಸಂಬಂಧಗಳಲ್ಲಿ ಇತ್ತೀಚೆಗೆ ಸಕಾರಾತ್ಮಕ ಬೆಳವಣಿಗೆ ಕಂಡುಬಂದಿದ್ದ ನಡುವೆಯೇ ಈ ನಿರ್ಧಾರ ಹೊರಬಿದ್ದಿದೆ.
ಅಮೆರಿಕದ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ದುರುಪಯೋಗಪಡಿಸಿಕೊಂಡು ಅಪರಾಧ, ಡ್ರಗ್ಸ್ ವ್ಯವಹಾರ ಹಾಗೂ ಭಯೋತ್ಪಾದಕ ಚಟುವಟಿಕೆಗಳಿಗೆ ಕೆಲ ವಲಸಿಗರು ಕಾರಣರಾಗುತ್ತಿದ್ದಾರೆ ಎಂಬ ಆರೋಪಗಳಿವೆ. ಇಂತಹ ಅಪಾಯಗಳನ್ನು ತಡೆಗಟ್ಟುವ ಸಲುವಾಗಿ ಜನವರಿ 21ರಿಂದ ಈ 75 ದೇಶಗಳ ವಲಸೆ ಅರ್ಜಿಗಳನ್ನು ಪ್ರಕ್ರಿಯೆಗೊಳಿಸಲಾಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ನಿರ್ಧಾರ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದ್ದು, ವಲಸೆ ನೀತಿಗಳ ಕುರಿತಾದ ಅಮೆರಿಕದ ಕಠಿಣ ನಿಲುವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದೆ.


