ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಆರ್ ನಗರ ಮೂಲದ ಮನೆಗೆಲಸದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ದೋಷಿ ಎಂಬುದು ಸಾಬೀತಾಗಿದ್ದು, ಇದೀಗ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶಿಕ್ಷೆಯ ಪ್ರಮಾಣ ಪ್ರಕಟಿಸಿದೆ.
ಪ್ರಜ್ವಲ್ ರೇವಣ್ಣಗೆ ಜೀವಾವಧಿಶಿಕ್ಷೆ ಹಾಗೂ 5 ಲಕ್ಷ ರೂ. ದಂಡ ವಿಧಿಸಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಜಡ್ಜ್ ಸಂತೋಷ್ ಗಜಾನನ ಭಟ್ ತೀರ್ಪು ನೀಡಿದ್ದಾರೆ.
ಪ್ರಜ್ವಲ್ ರೇವಣ್ಣಗೆ ಜೀವಾವಧಿಶಿಕ್ಷೆ ಹಾಗೂ 5 ಲಕ್ಷ ರೂ. ದಂಡ ವಿಧಿಸಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಜಡ್ಜ್ ಸಂತೋಷ್ ಗಜಾನನ ಭಟ್ ತೀರ್ಪು ನೀಡಿದ್ದಾರೆ. ಅಲ್ಲದೇ ಸಂತ್ರಸ್ತೆಗೆ 11 ಲಕ್ಷ ರೂ. ಪರಿಹಾರ ನೀಡಲು ಸೂಚಿಸಲಾಗಿದೆ.
ಐಪಿಸಿ ಸೆಕ್ಷನ್ 376(2)(k) ಅಡಿ ತೀರ್ಪು ಪ್ರಕಟಿಸಲಾಗಿದ್ದು,ಜೀವನ ಪರ್ಯಂತ ಜೈಲು ಶಿಕ್ಷೆಯನ್ನು ಪ್ರಜ್ವಲ್ ಅನುಭವಿಸಬೇಕಿದೆ.
ಶುಕ್ರಚಾರ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯವು ಮಾಜಿ ಸಂಸದ ಪ್ರಜ್ವಲ್ ರೇವಣ್ಣ ದೋಷಿ ಎಂದು ತೀರ್ಪು ನೀಡಿತ್ತು. ಇದೀಗ ಶಿಕ್ಷೆ ಪ್ರಕಟವಾಗಿದೆ. ವಿಚಾರಣೆಯ ಬಳಿಕ ಆದೇಶವನ್ನು ಮಧ್ಯಾಹ್ನಕ್ಕೆ ಕಾಯ್ದಿರಿಸಿದ್ದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು, ತೀರ್ಪು ಪ್ರಕಟಿಸಿದ್ದಾರೆ.
ಸಿಕ್ಯೂಷನ್ ಪರವಾಗಿ ಎಸ್ಪಿಪಿ ಬಿ.ಎನ್ ಜಗದೀಶ್ ವಾದ ಮಾಡಿದರು. ಶಿಕ್ಷೆ ಎಷ್ಟು ಎಂದು ಸ್ಪಷ್ಟವಾಗಿದೆ. ಕೇವಲ ಅತ್ಯಾಚಾರ ಆಗಿದ್ದರೆ 10 ವರ್ಷದಿಂದ ಜೀವಾವಧಿ ಶಿಕ್ಷೆ ವಿಧಿಸಲು ಅವಕಾಶವಿತ್ತು. ಆದರೆ ಇಲ್ಲಿ ಪದೇ ಪದೆ ಅತ್ಯಾಚಾರವಾಗಿದೆ. ಕನಿಷ್ಠ 10 ವರ್ಷ, ಗರಿಷ್ಠ ಜೀವನ ಪರ್ಯಂತ ಸೆರೆವಾಸದ ಅವಕಾಶ ಇದೆ. ಮಹಿಳೆ ಶಿಕ್ಷಿತಳಲ್ಲ, ಬಡ ಕೂಲಿ ಕೆಲಸದ ಮಹಿಳೆ. ಆಕೆಯ ಮೇಲೆ ಅಧಿಕಾರಯುತ ಸ್ಥಿತಿಯಲ್ಲಿ ಅತ್ಯಾಚಾರ ನಡೆಸಿರುವಂತಹ ಅಪರಾಧ ಸಾಬೀತಾಗಿದೆ. ದುರದೃಷ್ಟವಶಾತ್ ಆಕೆಗೆ ಯಾವುದೇ ಸ್ಥಾನಮಾನವಿಲ್ಲ. ವಿಡಿಯೋ ನೋಡಿದರೆ ಕೃತ್ಯದ ತೀವ್ರತೆ ಸ್ಪಷ್ಟವಾಗಿದೆ. 10 ಸಾವಿರ ಸಂಬಳಕ್ಕೆ ಇವರು ಕೆಲಸ ಮಾಡುತ್ತಿದ್ದರು ಎಂದು ಬಿಎನ್ ಜಗದೀಶ್ ವಾದಿಸಿದರು.
ಒಪ್ಪಿಗೆ ಇಲ್ಲದೆ ಲೈಂಗಿಕ ಕ್ರಿಯೆಯ ಚಿತ್ರೀಕರಣ ಮಾಡಲಾಗಿದೆ. ಆಕೆಯನ್ನು ಬ್ಲಾಕ್ಮೇಲ್ ಮಾಡಿ ಅತ್ಯಾಚಾರ ಮಾಡಲಾಗಿದೆ. ಅತ್ಯಾಚಾರದ ರೀತಿ ಆತನ ವಕ್ರ ಮನಸ್ಥಿತಿ ತೋರಿಸುತ್ತದೆ. ಪ್ರಜ್ವಲ್ ಸಂಸದನಾಗಿದ್ದು ಇಂತಹ ದುಷ್ಕೃತ್ಯ ಎಸಗಿದ್ದಾನೆ. ಕಾನೂನು ತಿಳಿದಿದ್ದರೂ ಕೂಡ ಇಂತಹ ನೀಚ ಕೃತ್ಯ ಎಸಗಿದ್ದಾನೆ. ಈತನ ಮೇಲೆ ಈ ರೀತಿಯ ಇನ್ನಷ್ಟು ಕೇಸ್‌ಗಳಿವೆ. ಬಹಳಷ್ಟು ಜನರ ಅಶ್ಲೀಲ ವಿಡಿಯೋ ಮಾಡಿದ್ದಾನೆ. ವಿಡಿಯೋ ಚಿತ್ರೀಕರಿಸಿದ್ದು ಗಂಭೀರವಾದ ಅಪರಾಧವಾಗಿದೆ. ಪ್ರಜ್ವಲ್‌ಗೆ ಗರಿಷ್ಠ ಶಿಕ್ಷೆ ವಿಧಿಸಿ. ಇದು ಇತರರಿಗೂ ಎಚ್ಚರಿಕೆಯಾಗಬೇಕು ಎಂದರು.
ಪ್ರಾಸಿಕ್ಯೂಷನ್ ಪರ ವಕೀಲ ಅಶೋಕ್ ನಾಯಕ್ ವಾದ ಆರಂಭಿಸಿ, ಸಂಸದರೇ ಇಂತಹ ಕೃತ್ಯ ಮಾಡಿದಾಗ ಗರಿಷ್ಠ ಶಿಕ್ಷೆ ವಿಧಿಸಬೇಕು ಎಂದು ಕೋರ್ಟ್‌ಗೆ ಮನವಿ ಮಾಡಿದರು. ರಾಜಕಾರಣಿಯಾಗಿ ಕಿರಿಯ ವಯಸ್ಸಿನಲ್ಲಿ ಸಂಸದನಾಗಿದ್ದ. ಜನ ಆಯ್ಕೆ ಮಾಡಿದ್ದು ಏಕೆ? ಜನರಿಂದ ಅರಿಸಲ್ಪಟ್ಟ ಈತ ಮಾಡಿದ್ದೇನು? ಹಾಗಾಗಿ ಈತನಿಗೆ ವಿಧಿಸುವ ಶಿಕ್ಷೆ ಸಮಾಜಕ್ಕೆ ಸಂದೇಶವಾಗಬೇಕು. ಪ್ರಜ್ವಲ್ ಬಡವನಲ್ಲ ಕರೋಡ್ ಪತಿಯಾಗಿದ್ದಾನೆ. ಹೆಚ್ಚಿನ ದಂಡ ವಿಧಿಸಿ ಅದರ ದೊಡ್ಡ ಭಾಗ ಸಂತ್ರಸ್ತರಿಗೆ ನೀಡಬೇಕು. ವಿಡಿಯೋ ವೈರಲ್ ಆಗಿ ಆಕೆ ದುಡಿಯಲು ಎಲ್ಲೂ ಹೋಗದಂತೆ ಆಗಿದೆ. ಸೆಕ್ಷನ್ 357ರ ಅಡಿಯಲ್ಲಿ ದೊಡ್ಡ ಮೊತ್ತದ ದಂಡ ವಿಧಿಸಬೇಕು ಎಂದು ವಾದಿಸಿದರು.
ನಂತರ ಪ್ರಜ್ವಲ್ ಅಭಿಪ್ರಾಯವನ್ನು ನ್ಯಾಯಾಲಯ ಕೋರಿತ್ತು. ಅದಕ್ಕೆ ಪ್ರತಿಕ್ರಿಯಿಸಿದ್ದ ಪ್ರಜ್ವಲ್, ಸಂಸದನಾಗಿದ್ದಾಗ ಯಾರೂ ಆರೋಪ ಮಾಡಿರಲಿಲ್ಲ. ಆಗ ಏಕೆ ಆರೋಪಿಸಿರಲಿಲ್ಲ? ಚುನಾವಣೆ ಸಮಯದಲ್ಲಿಯೇ ಯಾಕೆ ಹಾಗೆ ಮಾಡಿದ್ದಾರೆ ಎಂದು ಪ್ರಶ್ನಿಸಿದ್ದರಲ್ಲದೆ, ನ್ಯಾಯಾಲಯ ಏನೇ ತೀರ್ಮಾನ ಕೈಗೊಂಡರೂ ಅದನ್ನು ಒಪ್ಪಿಕೊಳ್ಳುತ್ತೇನೆ ಎಂದಿದ್ದರು.