ಹೊಸದಿಗಂತ ವರದಿ, ಮಂಗಳೂರು:
ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಮೃತದೇಹಗಳನ್ನು ಹೂಳಲಾಗಿದೆ ಎನ್ನಲಾದ ಪ್ರಕರಣದ ತನಿಖೆಗೆ ರಾಜ್ಯ ಸರಕಾರ ರಚಿಸಿರುವ ವಿಶೇಷ ತನಿಖಾ ತಂಡದ ಸದಸ್ಯರು ಶುಕ್ರವಾರ ಸಂಜೆ ವೇಳೆಗೆ ಮಂಗಳೂರಿಗೆ ಆಗಮಿಸಿದ್ದಾರೆ.
ಸಂಜೆ ಐದು ಗಂಟೆಗೆ ಎಸ್ಐಟಿ ತಂಡದ ಸದಸ್ಯರಾದ ಎಂ.ಎನ್. ಅನುಚೇತ್ ಹಾಗೂ ಜಿತೇಂದ್ರ ಕುಮಾರ್ ದಯಾಮ ಅವರು ಮಂಗಳೂರಿನ ಐಜಿ ಕಚೇರಿಗೆ ಆಗಮಿಸಿದರು.
ಪಶ್ಚಿಮ ವಲಯ ಪೊಲೀಸ್ ಮಹಾ ನಿರೀಕ್ಷಕ ಅಮಿತ್ ಸಿಂಗ್ ಹಾಗೂ ದ.ಕ. ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕುಮಾರ್ ಅವರೊಂದಿಗೆ ಸುಮಾರು ಒಂದೂವರೆ ಗಂಟೆ ಕಾಲ ಮಾತುಕತೆ ನಡೆಸಿ ಸಂಜೆ 6.30ರ ವೇಳೆಗೆ ನಿರ್ಗಮಿಸಿದ್ದಾರೆ.
ಇದಕ್ಕೂ ಮೊದಲು ನಗರದ ಐಬಿಯಲ್ಲಿ ಎಸ್‌ಐಟಿ ತಂಡದ ಇತರ ಅಧಿಕಾರಿಗಳ ಜತೆ ಎಂ.ಎನ್. ಅನುಚೇತ್ ಹಾಗೂ ಜಿತೇಂದ್ರ ಕುಮಾರ್ ಮಹತ್ವದ ಸಭೆ ನಡೆಸಿದ್ದಾರೆ.
ಎಸ್ ಐಟಿಗೆ ಬೆಳ್ತಂಗಡಿಯಲ್ಲಿ ಕಚೇರಿ ಆರಂಭಿಸಲಾಗುತ್ತಿದೆ. ಎಸ್‌ಐಟಿ ತನಿಖೆಗೆ ಅನುಕೂಲವಾಗುವಂತೆ ಬೆಳ್ತಂಗಡಿ ಪೊಲೀಸ್ ಠಾಣೆಯ ಪಕ್ಕದಲ್ಲಿರುವ ನೂತನ ಪೊಲೀಸ್ ವಸತಿಗೃಹದ ನೆಲ ಅಂತಸ್ತಿನ 2 ಕೊಠಡಿಗಳನ್ನು ಬಳಕೆ ಮಾಡಿಕೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಎಸ್‌ಐಟಿ ಅಧಿಕಾರಿಗಳು ಭೇಟಿ ನೀಡಿದ ಬಳಿಕ ಪೂರ್ಣ ಪ್ರಮಾಣದಲ್ಲಿ ಈ ಕಚೇರಿ ಕಾರ್ಯಾರಂಭವಾಗಲಿದೆ.