ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಿಳಾ ಏಕದಿನ ವಿಶ್ವಕಪ್‌ನ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ತೀವ್ರ ಹಿನ್ನಡೆಯಾಗಿದೆ. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡಿದ್ದ ಭಾರತದ ಆರಂಭಿಕ ಬ್ಯಾಟರ್ ಪ್ರತಿಕಾ ರಾವಲ್ ಅವರು ಇದೀಗ ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆ ಹೆಚ್ಚಾಗಿದೆ.
ನವಿ ಮುಂಬೈನಲ್ಲಿ ಗುರುವಾರ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಮಹತ್ವದ ಪಂದ್ಯಕ್ಕೂ ಮೊದಲು, ಪ್ರತಿಕಾ ಅವರ ಗಾಯ ತಂಡದ ತಲೆನೋವಿನ ಕಾರಣವಾಗಿದೆ. ನಿನ್ನೆ ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವ ಸಮಯದಲ್ಲಿ ಪ್ರತಿಕಾ ಅವರ ಕಾಲು ಉಳುಕಿಕೊಂಡಿದ್ದು, ತೀವ್ರ ನೋವಿನ ಕಾರಣದಿಂದ ಫಿಸಿಯೋ ಸಹಾಯದೊಂದಿಗೆ ಮೈದಾನದಿಂದ ಹೊರನಡೆದರು.
ಪ್ರತಿಕಾ ರಾವಲ್ ಪ್ರಸ್ತುತ ಭಾರತದ ವೈದ್ಯಕೀಯ ತಂಡದ ಆರೈಕೆಯಲ್ಲಿದ್ದಾರೆ. ಅವರ ಗಾಯದ ತೀವ್ರತೆಯನ್ನು ವೈದ್ಯರು ವಿಶ್ಲೇಷಿಸುತ್ತಿದ್ದು, ಅವರ ಫಿಟ್ನೆಸ್ ವರದಿ ಇಂದು ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ಬಗ್ಗೆ ಭಾರತೀಯ ನಾಯಕಿ ಹರ್ಮನ್‌ಪ್ರೀತ್ ಕೌರ್ ಸ್ಪಷ್ಟನೆ ನೀಡುತ್ತಾ, “ಅವರ ಸ್ಥಿತಿಯನ್ನು ಪರಿಶೀಲಿಸಲಾಗುತ್ತಿದೆ, ಆದರೆ ಆಟದ ಬಗ್ಗೆ ಇನ್ನೂ ನಿರ್ಧಾರ ಕೈಗೊಳ್ಳಲಾಗಿಲ್ಲ” ಎಂದು ಹೇಳಿದ್ದಾರೆ.
ಭಾರತದ ಮಾಜಿ ನಾಯಕಿ ಮಿಥಾಲಿ ರಾಜ್ ಪ್ರತಿಕಾ ಅವರ ಗಾಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. “ಪ್ರತಿಕಾ ಆಡಲು ಸಾಧ್ಯವಾಗದಿದ್ದರೆ, ಹರ್ಲೀನ್ ಡಿಯೋಲ್ ಅವರನ್ನು ಆರಂಭಿಕರನ್ನಾಗಿ ಕಣಕ್ಕಿಳಿಸಬಹುದು. ಪರ್ಯಾಯವಾಗಿ, ವಿಕೆಟ್ ಕೀಪರ್ ಉಮಾ ಛೆಟ್ರಿ ಅವರನ್ನು ಸಹ ಪರಿಗಣಿಸಬಹುದು” ಎಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರತಿಕಾ ರಾವಲ್ ಇತ್ತೀಚಿನ ಪಂದ್ಯಗಳಲ್ಲಿ ಭಾರತಕ್ಕೆ ಉತ್ತಮ ಆರಂಭ ನೀಡುತ್ತಿದ್ದ ಕಾರಣ, ಅವರ ಅನುಪಸ್ಥಿತಿ ತಂಡಕ್ಕೆ ದೊಡ್ಡ ಹಿನ್ನಡೆಯಾಗಬಹುದು. ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯವು ಟೀಂ ಇಂಡಿಯಾಗೆ ಮಹತ್ವದ ಹಂತವಾಗಿದ್ದು, ಪ್ರತಿಕಾ ಆಡದಿದ್ದರೆ ಹೊಸ ಆಟಗಾರ್ತಿಯ ಪ್ರದರ್ಶನದ ಮೇಲೆ ಎಲ್ಲರ ಕಣ್ಣುಗಳಿರಲಿದೆ.

