ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ಆರಂಭಕ್ಕೆ ಇನ್ನು ಕೆಲವೇ ತಿಂಗಳುಗಳು ಬಾಕಿ ಇರುವ ಬೆನ್ನಲ್ಲೇ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ತಂಡದ ಪ್ರಮುಖ ಫಿನಿಶರ್ ಎಂದೇ ಗುರುತಿಸಿಕೊಂಡಿರುವ ಟಿಮ್ ಡೇವಿಡ್ ಅವರು ಬಿಗ್ ಬ್ಯಾಷ್ ಲೀಗ್ ವೇಳೆ ಗಂಭೀರ ಗಾಯಕ್ಕೆ ತುತ್ತಾಗಿದ್ದಾರೆ.

ಪರ್ತ್‌ನಲ್ಲಿ ನಡೆದ ಬಿಗ್ ಬ್ಯಾಷ್ ಲೀಗ್‌ನ 12ನೇ ಪಂದ್ಯದಲ್ಲಿ ಹೋಬರ್ಟ್ ಹರಿಕೇನ್ಸ್ ಪರ ಆಡುತ್ತಿದ್ದ ಟಿಮ್ ಡೇವಿಡ್, ಬ್ಯಾಟಿಂಗ್ ಮಾಡುತ್ತಿದ್ದಾಗ ಮಂಡಿರಜ್ಜು ಗಾಯಕ್ಕೆ ಒಳಗಾಗಿದ್ದಾರೆ. ನೋವು ತೀವ್ರವಾಗಿದ್ದರಿಂದ ಅವರು ಅರ್ಧದಲ್ಲೇ ಬ್ಯಾಟಿಂಗ್ ನಿಲ್ಲಿಸಿ ಕಣದಿಂದ ಹೊರನಡೆದಿದ್ದಾರೆ.
ಗಾಯದ ಸ್ವರೂಪ ಗಂಭೀರವಾಗಿದ್ದು, ವೈದ್ಯರು ಟಿಮ್ ಡೇವಿಡ್ ಅವರಿಗೆ ದೀರ್ಘಕಾಲದ ವಿಶ್ರಾಂತಿಯನ್ನು ಸೂಚಿಸಿದ್ದಾರೆ. ಫೆಬ್ರವರಿ 7 ರಿಂದ ಆರಂಭವಾಗಲಿರುವ ಟಿ20 ವಿಶ್ವಕಪ್‌ನಲ್ಲಿ ಇವರು ಆಡುವುದು ಅನುಮಾನ ಎನ್ನಲಾಗುತ್ತಿದೆ.
ಒಂದು ವೇಳೆ ಗಾಯ ವಾಸಿಯಾಗಲು ಹೆಚ್ಚಿನ ಸಮಯ ತೆಗೆದುಕೊಂಡರೆ, ಮಾರ್ಚ್ 26 ರಿಂದ ಶುರುವಾಗಲಿರುವ ಐಪಿಎಲ್‌ನಿಂದಲೂ ಅವರು ಹೊರಬೀಳುವ ಸಾಧ್ಯತೆ ಇದೆ.
ಈ ಬಾರಿಯ ಮೆಗಾ ಹರಾಜಿನಲ್ಲಿ ಭಾರಿ ಮೊತ್ತಕ್ಕೆ ಆರ್‌ಸಿಬಿ ಪಾಲಾಗಿದ್ದ ಟಿಮ್ ಡೇವಿಡ್, ತಂಡದ ಮಧ್ಯಮ ಕ್ರಮಾಂಕದ ಶಕ್ತಿಯಾಗಿದ್ದರು. ಈಗ ಅವರ ಗೈರುಹಾಜರಿ ತಂಡದ ಸಮತೋಲನವನ್ನು ಕೆಡಿಸುವ ಭೀತಿ ಮೂಡಿಸಿದೆ. ಅವರು ಐಪಿಎಲ್ ಆಡುತ್ತಾರೋ ಇಲ್ಲವೋ ಎಂಬುದು ಫೆಬ್ರವರಿ ವೇಳೆಗೆ ಸ್ಪಷ್ಟವಾಗಲಿದೆ.

