ಹೊಸದಿಗಂತ ಡಿಜಿಟಲ್ ಡೆಸ್ಕ್:
ಅತ್ಯಾಚಾರ ಆರೋಪಗಳನ್ನು ಎದುರಿಸುತ್ತಿರುವ ಆರ್ಸಿಬಿ ವೇಗೆ ಯಶ್ ದಯಾಳ್ ಇದೀಗ ಬಂಧನದ ಭೀತಿಯಲ್ಲಿದ್ದಾರೆ.
ಅಪ್ರಾಪ್ತ ವಯಸ್ಕಳ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ರಾಜಸ್ಥಾನ ಹೈಕೋರ್ಟ್ನ ನ್ಯಾಯಮೂರ್ತಿ ಸುದೇಶ್ ಬನ್ಸಾಲ್ ಅವರ ಏಕ ಸದಸ್ಯ ಪೀಠವು ಯಶ್ ದಯಾಳ್ ಅವರ ಬಂಧನ ಮತ್ತು ಪೊಲೀಸ್ ಕ್ರಮಕ್ಕೆ ತಡೆ ನೀಡಲು ನಿರಾಕರಿಸಿದೆ. ಇದರ ಜೊತೆಗೆ ಪ್ರಕರಣದ ಡೈರಿಯನ್ನು ಹಾಜರುಪಡಿಸಲು ನ್ಯಾಯಾಲಯ, ಪೊಲೀಸರಿಗೆ ಆದೇಶಿಸಿದ್ದು, ಮುಂದಿನ ವಿಚಾರಣೆಯನ್ನು ಆಗಸ್ಟ್ 22, 2025 ಕ್ಕೆ ನಿಗದಿಪಡಿಸಲಾಗಿದೆ.
ಹೈಕೋರ್ಟ್‌ನಲ್ಲಿ ವಿಚಾರಣೆಯ ಸಮಯದಲ್ಲಿ, ಯಶ್ ದಯಾಳ್ ಪರ ವಾದ ಮಂಡಿಸಿದ ವಕೀಲ ಕುನಾಲ್ ಜೈಮನ್, ‘ಯಶ್ ದಯಾಳ್ ವಿರುದ್ಧ ಸಂಘಟಿತ ಗ್ಯಾಂಗ್ವೊಂದು ಈ ರೀತಿಯ ಆರೋಪಗಳನ್ನು ಹೊರಿಸುತ್ತಿದೆ. ಈ ಗ್ಯಾಂಗ್ ದಯಾಳ್ ವಿರುದ್ಧ ಈ ರೀತಿಯ ಸುಳ್ಳು ಪ್ರಕರಣಗಳನ್ನು ದಾಖಲಿಸುವ ಮೂಲಕ ಅವರನ್ನು ಬ್ಲ್ಯಾಕ್‌ಮೇಲ್ ಮಾಡಲು ಪ್ರಯತ್ನಿಸುತ್ತಿದ್ದಾರೆ.
ಗಾಜಿಯಾಬಾದ್‌ನಲ್ಲಿಯೂ ಸಹ, ಯಶ್ ದಯಾಳ್ ವಿರುದ್ಧ ಒಬ್ಬ ಹುಡುಗಿ ಅತ್ಯಾಚಾರ ಪ್ರಕರಣವನ್ನು ದಾಖಲಿಸಿದ್ದಾಳೆ. ಆದರೆ ಆ ಪ್ರಕರಣದಲ್ಲಿ ದಯಾಳ್ ಅವರನ್ನು ಬಂಧಿಸದಂತೆ ಅಲಹಾಬಾದ್ ಹೈಕೋರ್ಟ್ ತಡೆಹಿಡಿದಿತ್ತು. ಆದಾಗಿ ಕೇವಲ ಏಳು ದಿನಗಳ ನಂತರ ಜೈಪುರದಲ್ಲಿ ಮತ್ತೊಬ್ಬ ಹುಡುಗಿ ಯಶ್ ವಿರುದ್ಧ ದೂರು ದಾಖಲಿಸಿದ್ದಾಳೆ. ಇದೆಲ್ಲ ಈ ಸಂಘಟಿತ ಗ್ಯಾಂಗ್ನ ಪಿತೂರಿಯ ಒಂದು ಭಾಗವಾಗಿದೆ. ಯಶ್ ಅವರ ಮೇಲೆ ಈ ರೀತಿಯ ಆರೋಪಗಳನ್ನು ಹೊರಿಸಿ ಅವರಿಂದ ಆರ್ಥಿಕ ಲಾಭ ಪಡೆಯಲು ಈ ಗ್ಯಾಂಗ್ ಈ ರೀತಿಯ ಕೆಲಸ ಮಾಡುತ್ತಿದೆ ಎಂದು ದಯಾಳ್ ಪರ ವಕೀಲರು ವಾದಿಸಿದರು.