ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳು ಚಿತ್ರರಂಗದ ಸ್ಟಾರ್ ನಟ ದಳಪತಿ ವಿಜಯ್ ಅವರ ರಾಜಕೀಯ ಪ್ರವೇಶಕ್ಕೂ ಮುನ್ನ ತೆರೆಗೆ ಬರಬೇಕಿದ್ದ ‘ಜನ ನಾಯಗನ್’ ಸಿನಿಮಾ ಒಂದರ ಮೇಲೊಂದರಂತೆ ಸಮಸ್ಯೆಗಳನ್ನು ಎದುರಿಸುತ್ತಿದೆ. ಜನವರಿ 9ರಂದೇ ಬಿಡುಗಡೆಯಾಗಬೇಕಿದ್ದ ಈ ಚಿತ್ರಕ್ಕೆ ಮೊದಲು ಸೆನ್ಸಾರ್ ಮಂಡಳಿಯಿಂದ ಅಡೆತಡೆ ಉಂಟಾಗಿತ್ತು. ಈಗ ಆರ್ಥಿಕವಾಗಿಯೂ ಚಿತ್ರತಂಡಕ್ಕೆ ದೊಡ್ಡ ಪೆಟ್ಟು ಬೀಳುವ ಲಕ್ಷಣಗಳು ಕಾಣಿಸುತ್ತಿವೆ.
ವರದಿಗಳ ಪ್ರಕಾರ, ಖ್ಯಾತ ಒಟಿಟಿ ಸಂಸ್ಥೆ ಅಮೇಜಾನ್ ಪ್ರೈಮ್ ವಿಡಿಯೋ ಈ ಚಿತ್ರದ ಹಕ್ಕನ್ನು ಬರೋಬ್ಬರಿ 120 ಕೋಟಿ ರೂಪಾಯಿಗೆ ಖರೀದಿಸಿದೆ. ಮೂಲ ಬಿಡುಗಡೆಯ ದಿನಾಂಕಕ್ಕೆ ತಕ್ಕಂತೆ ಒಟಿಟಿ ರಿಲೀಸ್ ಡೇಟ್ ಕೂಡ ಫಿಕ್ಸ್ ಆಗಿತ್ತು. ಆದರೆ ಸಿನಿಮಾ ಥಿಯೇಟರ್‌ನಲ್ಲಿ ರಿಲೀಸ್ ಆಗುವುದು ವಿಳಂಬವಾಗುತ್ತಿರುವುದರಿಂದ, ಸಂಸ್ಥೆಯು ಕಾನೂನು ಹೋರಾಟಕ್ಕೆ ಮುಂದಾಗುವ ಸಾಧ್ಯತೆ ಇದೆ ಅಥವಾ ಒಪ್ಪಂದದ ಮೊತ್ತದಲ್ಲಿ ಭಾರಿ ಕಡಿತ ಮಾಡುವ ಎಚ್ಚರಿಕೆ ನೀಡಿದೆ ಎನ್ನಲಾಗಿದೆ.
ಒಂದೆಡೆ ಸೆನ್ಸಾರ್ ವಿಚಾರವಾಗಿ ಕೋರ್ಟ್‌ನಲ್ಲಿ ಹಿನ್ನಡೆಯಾಗುತ್ತಿದ್ದರೆ, ಇನ್ನೊಂದೆಡೆ ತಮಿಳುನಾಡು ವಿಧಾನಸಭೆ ಚುನಾವಣೆಯ ದಿನಾಂಕ ಘೋಷಣೆಯಾಗುವ ಆತಂಕ ನಿರ್ಮಾಪಕರನ್ನು ಕಾಡುತ್ತಿದೆ. ಒಮ್ಮೆ ನೀತಿ ಸಂಹಿತೆ ಜಾರಿಯಾದರೆ ಅಥವಾ ಚುನಾವಣೆ ಹತ್ತಿರವಾದರೆ, ರಾಜಕೀಯ ಪ್ರೇರಿತ ಕಥೆಯುಳ್ಳ ಈ ಚಿತ್ರದ ಪ್ರದರ್ಶನಕ್ಕೆ ಮತ್ತಷ್ಟು ಅಡ್ಡಿಯಾಗಬಹುದು.
ಒಟ್ಟಿನಲ್ಲಿ ವಿಜಯ್ ಅವರ ವೃತ್ತಿಜೀವನದ ಮೈಲಿಗಲ್ಲಾಗಬೇಕಿದ್ದ ಸಿನಿಮಾ ಈಗ ಕಾನೂನು ಮತ್ತು ಆರ್ಥಿಕ ಸಂಕಷ್ಟದ ಸುಳಿಯಲ್ಲಿ ಸಿಲುಕಿದೆ.


